ಆಟದಲ್ಲಿ ಸೋತದ್ದಕ್ಕೆ ಗೇಲಿ: 12 ವರ್ಷದ ಬಾಲಕಿ ಸೇರಿದಂತೆ ಏಳು ಮಂದಿಯ ಗುಂಡಿಕ್ಕಿ ಹತ್ಯೆ

ಆಟದಲ್ಲಿ ಸೋತದ್ದಕ್ಕೆ ಗೇಲಿ: 12 ವರ್ಷದ ಬಾಲಕಿ ಸೇರಿದಂತೆ ಏಳು ಮಂದಿಯ ಗುಂಡಿಕ್ಕಿ ಹತ್ಯೆ

ಸಾಂದರ್ಭಿಕ ಚಿತ್ರ

ಬ್ರಸಿಲಿಯಾ: ಪೂಲ್ ಗೇಮ್ ಒಂದರಲ್ಲಿ ಸತತ ಎರಡು ಸುತ್ತನ್ನು ಸೋತ ಇಬ್ಬರು ಕ್ರೀಡಾಪಟುಗಳನ್ನು ನೋಡಿ ನಕ್ಕ ಇತರ ಕ್ರೀಡಾಪಟುಗಳ ಮೇಲೆ ಆ ಇಬ್ಬರು ಬಂದೂಕಿನಿಂದ ದಾಳಿ ನಡೆಸಿದ ಪರಿಣಾಮ 12 ವರ್ಷದ ಬಾಲಕಿ ಸೇರಿದಂತೆ ಒಟ್ಟು ಏಳು ಮಂದಿ ಹತ್ಯೆಗೀಡಾಗಿದ್ದಾರೆ ಎಂದು mirror.co.uk ವರದಿ ಮಾಡಿದೆ.

ಬ್ರೆಝಿಲ್‌ನ ಮ್ಯಾಟೊ ಗ್ರಾಸೊ ರಾಜ್ಯದ ಸಿನಾಪ್ ಸಿಟಿಯಲ್ಲಿ ಈ ಘಟನೆ ಸಂಭವಿಸಿದ್ದು, ಗುರುವಾರ ಪೂಲ್ ಗೇಮ್‌ನಲ್ಲಿ ಇಬ್ಬರು ಕ್ರೀಡಾಪಟುಗಳು ಸತತ ಎರಡು ಸುತ್ತಲ್ಲಿ ಸೋತಿದ್ದನ್ನು ನೋಡಿ ನಕ್ಕ ಇತರ ಕ್ರೀಡಾಪಟುಗಳ ಮೇಲೆ ಕುಪಿತಗೊಂಡ ಆ ಇಬ್ಬರು ಬಂದೂಕಿನಿಂದ ದಾಳಿ ನಡೆಸಿ ಏಳು ಮಂದಿಯನ್ನು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ದೃಶ್ಯಾವಳಿಗಳು ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ಓರ್ವ ಕ್ರೀಡಾಪಟು ಬಂದೂಕಿನಿಂದ ದಾಳಿ ಮಾಡುವ ಮುನ್ನ ಸಂತ್ರಸ್ತರನ್ನು ಗೋಡೆಗೆ ಸಾಲಾಗಿ ನಿಲ್ಲಿಸುತ್ತಿರುವುದು ಹಾಗೂ ಮತ್ತೋರ್ವ ಕ್ರೀಡಾಪಟು ಕರೆದೊಯ್ಯುವ ಟ್ರಕ್‌ನಿಂದ ಶಾಟ್ ಗನ್ ಕಸಿದುಕೊಳ್ಳುತ್ತಿರುವುದು ಸೆರೆಯಾಗಿದೆ.

ದಾಳಿಕೋರರು ಹತ್ಯಾಕಾಂಡದ ಸ್ಥಳ ತೊರೆಯುವ ಮುನ್ನ ಓರ್ವ ಮಹಿಳೆ ಕೈಮೇಲೆತ್ತಿ ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ದಾಳಿಯಲ್ಲಿ ಕೆಲವರು ಮಾತ್ರ ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಿಂದ ಪಾರಾಗುವ ಮುನ್ನ ದಾಳಿಕೋರರು ಓರ್ವ ಮಹಿಳೆಯ ಪರ್ಸ್‌ನಲ್ಲಿದ್ದ ಸಣ್ಣ ಮೊತ್ತದ ಹಣವನ್ನು ಕಸಿದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಬಂದೂಕು ದಾಳಿಯಲ್ಲಿ ಕೂಡಲೇ ಮೃತರಾದ ಆರು ಮಂದಿಯನ್ನು ಲ್ಯಾರಿಸ್ಸಾ ಫ್ರಾಸಾವೊ ಅಲ್ಮೀಡಾ (12), ಒರಿಬೆರ್ಟೊ ಪೆರೀರಾ ಸೌಸಾ (38), ಅಡ್ರಿಯಾನೊ ಬಾಲ್ಬಿನೋಟೆ (46), ಗೆಟುಲಿಯೊ ರೋಡ್ರಿಗಸ್ ಫ್ರಾಸಾವೊ ಜೂನಿಯರ್ (36), ಜೋಸ್ಯೂ ರಾಮೋಸ್ ಟೆನೊರಿಯೊ (48) ಹಾಗೂ ಮೇಸಿಯಲ್ ಬ್ರೂನೊ ಡಿ ಆಯಂಡ್ರೇಡ್ ಕೋಸ್ಟಾ (35) ಎಂದು ಗುರುತಿಸಲಾಗಿದೆ. ನಂತರ ಏಳನೆಯ ಸಂತ್ರಸ್ತರಾದ ಎಲಿಝಿಯೊ ಸ್ಯಾಂಟೋಸ್ ಡ ಸಿಲ್ವಾ (47) ಅನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ದಾಳಿಕೋರರನ್ನು ಎಡ್ಗರ್ ರಿಕಾರ್ಡೊ ಡಿ ಒಲಿವೀರಾ (30), ಎಝೆಕ್ವಿಯಾಸ್ ಸೌಝಾ ರಿಬೈರೊ (27) ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ.