ಮುಖೇಶ್ ಅಂಬಾನಿ ಮನೆಯ ವಿಳಾಸವನ್ನು ಕೇಳಿದ್ದ ಪ್ರವಾಸಿಗನನ್ನು ಬಂಧಿಸಿದ ಪೊಲೀಸರು

ಮುಖೇಶ್ ಅಂಬಾನಿ ಮನೆಯ ವಿಳಾಸವನ್ನು ಕೇಳಿದ್ದ ಪ್ರವಾಸಿಗನನ್ನು ಬಂಧಿಸಿದ ಪೊಲೀಸರು

ಮುಂಬೈ: ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಗರದ ನಿವಾಸದ ಸುತ್ತಮುತ್ತ ಸೋಮವಾರ ರಾತ್ರಿ ಭದ್ರತೆಯನ್ನು ಬಿಗಿಗೊಳಿಸಿದ ನಂತರ 40 ವರ್ಷದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸುರೇಶ್ ವಿಸಾಂಜಿ ಪಟೇಲ್ ಎಂದು ಗುರುತಿಸಲಾದ ವ್ಯಕ್ತಿಯನ್ನು ನವಿ ಮುಂಬೈನಿಂದ ಬಂಧಿಸಲಾಗಿದೆ.

ಆರಂಭಿಕ ವಿಚಾರಣೆಯಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಪೊಲೀಸರು ಇಂದು ಬೆಳಿಗ್ಗೆ ಹೇಳಿದ್ದಾರೆ. ಪಟೇಲ್ ಅವರು ಪ್ರವಾಸಿಗರಾಗಿದ್ದು ನಗರದ ಹೆಗ್ಗುರುತಾಗಿರುವ ಅಂಬಾನಿ ಅವರ ಮನೆಯ ಬಗ್ಗೆ ಕುತೂಹಲದಿಂದ ವಿಚಾರಿಸಿದ್ದರು ಎನ್ನಲಾಗಿದೆ.

ಆದಾಗ್ಯೂ, ಯಾವುದೇ ಸಂಭವನೀಯ ಬೆದರಿಕೆಯನ್ನು ತಳ್ಳಿಹಾಕಲು ಪಟೇಲ್ ಅವರನ್ನು ಸಂಪೂರ್ಣವಾಗಿ ಪ್ರಶ್ನಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಅಂಬಾನಿ ನಿವಾಸವಿರುವ ಸ್ಥಳದ ಬಗ್ಗೆ ಇಬ್ಬರು ವ್ಯಕ್ತಿಗಳು ವಿಚಾರಿಸಿದ್ದರು ಎಂಬ ವಿಚಾರ ಗೊತ್ತಾದ ಬಳಿಕ ಪೊಲೀಸರು ಕಳೆದ ರಾತ್ರಿ ಅಂಬಾನಿ ಅವರ ನಿವಾಸ ಆಂಟಿಲಿಯಾ ಕಟ್ಟಡದ ಭದ್ರತೆಯನ್ನು ಹೆಚ್ಚಿಸಿದ್ದರು.

ದೊಡ್ಡ ಚೀಲವನ್ನು ಹೊತ್ತೊಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳು ತನ್ನ ಬಳಿಗೆ ಬಂದು ಅಂಬಾನಿ ನಿವಾಸದ ವಿಳಾಸವನ್ನು ಕೇಳಿದ್ದರು ಎಂದು ಟ್ಯಾಕ್ಸಿ ಡ್ರೈವರ್ ಒಬ್ಬರು ನಮಗೆ ಫೋನ್ ಮಾಡಿದ್ದಾರೆ ಎಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದರು.

ಇಂದು ಬೆಳಗ್ಗೆ ಪೊಲೀಸರು ಗುಜರಾತ್ ಮೂಲದ ಟ್ಯಾಕ್ಸಿ ಡ್ರೈವರ್ ಹಾಗೂ ಆತನ ವಾಹನವನ್ನು (ವ್ಯಾಗನ್ ಆರ್ ಟೂರಿಸ್ಟ್ ಟ್ಯಾಕ್ಸಿ) ಗುರುತಿಸಿದ್ದಾರೆ.