2032ರ ಹೊತ್ತಿಗೆ ಸೇನೆಯಲ್ಲಿ ಶೇ.50 ಅಗ್ನಿವೀರರು; ಸೈನಿಕರ ಸರಾಸರಿ ವಯಸ್ಸು 26ಕ್ಕೆ ಇಳಿಕೆ | ತಂತ್ರಜ್ಞಾನ ಸಜ್ಜಿತ ಯುವಕರು ಸೇನೆಗೆ ನಿಯೋಜನೆ

ನವದೆಹಲಿ: ಸುಮಾರು 2032ರ ಹೊತ್ತಿಗೆ ಭಾರತದ ಸೇನೆಯ ಒಟ್ಟು ಸಂಖ್ಯೆಯಲ್ಲಿ 'ಅಗ್ನಿಪಥ' ಯೋಜನೆಯನ್ವಯ ನೇಮಕ ಮಾಡಿಕೊಳ್ಳುವ ಅಗ್ನಿವೀರರ ಪ್ರಮಾಣ ಶೇಕಡ 50ರಷ್ಟು ಆಗಲಿದೆ. ಸೈನಿಕರ ಸರಾಸರಿ ವಯಸ್ಸನ್ನು ಮುಂದಿನ ಆರೇಳು ವರ್ಷಗಳಲ್ಲಿ ಈಗಿರುವ 32 ವರ್ಷದಿಂದ 24ರಿಂದ 26 ವರ್ಷಕ್ಕೆ ಇಳಿಸಲು ಹಾಗೂ ಭವಿಷ್ಯದ ಸಮರಗಳನ್ನು ನಿರ್ವಹಿಸಲು ತಂತ್ರಜ್ಞಾನ ಸಜ್ಜಿತ ಯುವಜನರನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ.
2022ರ ಮಧ್ಯಭಾಗದಲ್ಲಿ ಪಿಂಚಣಿ ಇತ್ಯಾದಿ ಸೌಲಭ್ಯ ಗಳಿಲ್ಲದ ಅಲ್ಪಾವಧಿ ಸೇವೆಯ ಅಗ್ನಿಪಥ ಯೋಜನೆಯನ್ನು ಪ್ರಕಟಿಸುವುದಕ್ಕೂ ಮುನ್ನ ಕೋವಿಡ್ ಸಾಂಕ್ರಾಮಿಕತೆ ಕಾರಣದಿಂದ ಸೇನೆ 2020-21 ಹಾಗೂ 2021-22ರಲ್ಲಿ ನೇಮಕಾತಿ ರ್ಯಾಲಿಗಳನ್ನು ರದ್ದುಪಡಿಸಿತ್ತು. ಇದರಿಂದಲೇ 1.2 ಲಕ್ಷ ಸೈನಿಕರ ಸಂಖ್ಯೆ ಕಡಿಮೆಯಾಗಿತ್ತು. 'ಅಗ್ನಿಪಥದ ಮೊದಲ ವರ್ಷದಲ್ಲಿ ಕೇವಲ 40,000 ಅಗ್ನಿವೀರರನ್ನು 2 ಬ್ಯಾಚ್ಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ' ಎಂದು ಭೂ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಗಾಟ ವ್ಯವಸ್ಥೆಯಲ್ಲಿ ವೆಚ್ಚ ಕಡಿತ: ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ನೇಮಕಾತಿ ಕಡಿತದ ಜೊತೆ ಸಾಗಾಟ ವ್ಯವಸ್ಥೆಯಲ್ಲಿ ಕೂಡ ವೆಚ್ಚ ಕಡಿತಕ್ಕೆ ಸೇನೆ ಮುಂದಾಗಿದೆ. 'ಟ್ರೇಡ್ಸ್ ಮೆನ್' ಮತ್ತು 'ಲೆಗಸಿ ಯುನಿಟ್'ಗಳನ್ನು ಹೊರಗುತ್ತಿಗೆ (ಔಟ್ಸೋರ್ಸ್) ನೀಡುವುದು ಅದರಲ್ಲಿ ಸೇರಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ರಾಷ್ಟ್ರೀಯ ರೈಫಲ್ಸ್ ನ ಭಯೋತ್ಪಾದನೆ-ವಿರೋಧಿ ದಳದ ಪುನಾರಚನೆಯೂ ಅದು ಒಳಗೊಂಡಿದೆ. ವೇತನ ಮತ್ತು ಪಿಂಚಣಿ ವೆಚ್ಚವೇ ಜಾಸ್ತಿಯಾಗುತ್ತಿದ್ದು ಮಿಲಿಟರಿ ಆಧುನೀಕರಣಕ್ಕೆ ಹೆಚ್ಚಿನ ಹಣ ದೊರಕದಿರುವುದರಿಂದ ಸಂಖ್ಯೆ ಕಡಿತ ಮತ್ತಿತರ ಕ್ರಮಗಳು ಅನಿವಾರ್ಯವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಇಳಿಮುಖವಾಗಿರುವುದರಿಂದ 1990ರಲ್ಲಿ ಒಂದು ಸಣ್ಣ ಪಡೆಯಾಗಿ ರೂಪಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ (ಆರ್ಆರ್) ಈಗ 63 ಬೆಟಾಲಿಯನ್ಗಳನ್ನು ಹೊಂದಿದೆ. ಅದನ್ನು ಪುನಾರಚಿಸುವ ಬಗ್ಗೆ ಸೇನೆ ಚಿಂತನೆ ನಡೆಸಿದೆ. ಸಾಗಾಟ ಡ್ರೋನ್ಗಳ ಸಂಖ್ಯೆ ಹೆಚ್ಚಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಶೇಕತ್ಕರ್ ಸಮಿತಿ ವರದಿ: ಶೇಕತ್ಕರ್ ಸಮಿತಿ ವರದಿ ಅನುಷ್ಠಾನಗೊಳಿಸುವ ಮೂಲಕ ಸೇನೆಯ ಮಾನವಶಕ್ತಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವ ಗುರಿಯನ್ನು ಸ್ವಲ್ಪ ಮಟ್ಟಿಗೆ ಸಾಧಿಸಲಾಗಿದೆ. ಸಮರ ಸಾಮರ್ಥ್ಯ ಹೆಚ್ಚಳ, ಕಾರ್ಯಾಚರಣೆಯೇತರ ಅಧಿಕ ವೆಚ್ಚದ ಕಡಿತ ಮತ್ತು ರಕ್ಷಣಾ ವೆಚ್ಚದಲ್ಲಿನ ಮರುಸಮತೋಲನ ಮುಂತಾದವು ವರದಿಯ ಶಿಫಾರಸುಗಳಲ್ಲಿ ಸೇರಿವೆ.