ನಮೋಗೆ ಜೈ ಎಂದ ಗುಜರಾತ್ ಮಂದಿ – ನೋಟಾ ಮತ ಶೇ.9ರಷ್ಟು ಇಳಿಕೆ
ಗಾಂಧಿನಗರ: ಗುಜರಾತಿನಲ್ಲಿ 2017ರ ವಿಧಾನಸಭಾ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ನೋಟಾ ಮತದಾನ ಶೇ.9 ರಷ್ಟು ಇಳಿಕೆಯಾಗಿದೆ.
ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, 2022ರ ವಿಧಾನಸಭಾ ಚುನಾವಣೆಯಲ್ಲಿ 5,01,202 (ಶೇ.1.5) ನೋಟಾ ಮತಗಳು ದಾಖಲಾಗಿದ್ದು, 2017ರ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಕ್ಕಿಂತಲೂ ಕಡಿಮೆಯಾಗಿದೆ. 2017ರ ಚುನಾವಣೆಯಲ್ಲಿ 5,51,594 ನೋಟಾ ಮತಗಳು ಚಲಾವಣೆಯಾಗಿದ್ದವು.
ಖೇದ್ಬ್ರಹ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು 7,331 ನೋಟಾ ಮತಗಳು ಚಲಾವಣೆಯಾಗಿದ್ದು, ದಾಂಟಾದಲ್ಲಿ 5,213 ಮತ್ತು ಛೋಟಾ ಉದಯ್ಪುರದಲ್ಲಿ 5,093 ಮತಗಳು ಚಲಾವಣೆಗೊಂಡಿವೆ. ದೇವಗಡಬಾರಿಯಾ ಕ್ಷೇತ್ರದಲ್ಲಿ 4,821 ನೋಟಾ ಮತಗಳು, ಶೆಹ್ರಾ 4,708, ನಿಜಾರ್ 4,465, ಬಾರ್ಡೋಲಿ 4,211, ದಸ್ಕ್ರೋಯ್ 4,189, ಧರಂಪುರ್ 4,189, ಚೋರಿಯಾಸಿ 4,169, ಸಂಖೇದಾ 4,143, ವಡೋದರಾ ನಗರದಲ್ಲಿ 4,143 ಹಾಗೂ ಕಪ್ರದಾದಲ್ಲಿ 4,022 ನೋಟಾ ಮತಗಳು ಚಲಾವಣೆಗೊಂಡಿವೆ.
ಎಲ್ಲಾ ದಾಖಲೆಗಳೂ ಉಡೀಸ್:
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗಳಿಸಿ ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿದೆ. ಕಾಂಗ್ರೆಸ್ 1985ರಲ್ಲಿ 149 ಸ್ಥಾನಗಳನ್ನು ಗಳಿಸಿದ್ದು, ಈ ವರೆಗಿನ ದಾಖಲೆಯಾಗಿತ್ತು. 2002ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿ ಆಗಿದ್ದಾಗ 127 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಈ ಬಾರಿ 27 ವರ್ಷಗಳ ಬಳಿಕ 156 ಸ್ಥಾನಗಳನ್ನು ಗೆದ್ದಿದ್ದು, ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿದೆ. ಇದರೊಂದಿಗೆ ಗುಜರಾತ್ನಲ್ಲಿ ಬಿಜೆಪಿ ಸತತ 7ನೇ ಗೆಲುವು ದಾಖಲಿಸಿದೆ.