ವಿದೇಶದಲ್ಲಿ ಕನ್ನಡ ಜಾತ್ರೆ ರುವಾರಿ 'ಮನು'ಗೆ ಹೆಮ್ಮೆಯ 'ಕನ್ನಡಿಗ ಪ್ರಶಸ್ತಿ ಗರಿ'

ವಿದೇಶದಲ್ಲಿ ಕನ್ನಡ ಜಾತ್ರೆ ರುವಾರಿ 'ಮನು'ಗೆ ಹೆಮ್ಮೆಯ 'ಕನ್ನಡಿಗ ಪ್ರಶಸ್ತಿ ಗರಿ'

ಬೆಂಗಳೂರು: ಸಪ್ತಸಾಗರದಾಚೆ ಬಹು ದೂರದ ಅಮೆರಿಕಾದ ಸಿಯಾಟಲ್ ನಲ್ಲಿ ಕನ್ನಡ ಜಾತ್ರೆ ನಡೆಯುತ್ತದೆ ಎಂದರೆ ನೀವು ನಂಬಲೇಬೇಕು. ಕನ್ನಡದ ಕಂಪನ್ನು ಹೊರನಾಡಿನಲ್ಲಿ ಪಸರಿಸುವುದು ಹೆಮ್ಮೆಯ ಪ್ರತೀಕ, ತಾಯ್ನಾಡಿನ ದ್ಯೋತಕ. ಅಂತಹದೊಂದು ಸಾಹಸಕ್ಕೆ ಕೈಹಾಕಿ ಸೈ ಎನಿಸಿಕೊಂಡಿರುವವರೇ ಮನು ಗೊರೂರು.

ಅವರಿಗೆ ಇದೀಗ ಕನ್ನಡಿಗ ಪ್ರಶಸ್ತಿಯ ಗರಿಮೆ ಸಂದಿದೆ.

ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನಿಂದ ಈ ಬಾರಿ ಸಿಯಾಟಲ್ ಕನ್ನಡ ಸಂಘದ ಅಧ್ಯಕ್ಷರಾದ ಮನು ಗೊರೂರು ಅವರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇವರು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಕಾರಣ ದೂರದ ಅಮೆರಿಕಕ್ಕೆ ಹೋಗಿ ನೆಲೆಸಿ ಎಂಟು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ತಾಯ್ನಾಡಿಗೆ ಆಗಮಿಸಿದ್ದಾರೆ. ಆದರೆ ಸಿಯಾಟಲ್ ನಗರಕ್ಕೆ ಹೋಗುವ ಪ್ರತಿಯೊಬ್ಬ ಕನ್ನಡಿಗರು, ರಾಜಕಾರಣಿಗಳು, ಕಲಾವಿದರಿಗೆ ಮನು ಗೊರೂರು ಚಿರಪರಿಚಿತರೇ ಆಗಿರುತ್ತಾರೆ.

ಉದ್ಯೋಗ ಅರಸಿ ವಿದೇಶದಲ್ಲಿ ನೆಲೆಸಿರುವ ಮನು ಅವರು, ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರ ಭಾಷಾಭಿಮಾನವನ್ನು ಹುರಿದುಂಬಿಸುತ್ತಾ, ತಾಯ್ನಾಡಿನ ಸಾಂಸ್ಕೃತಿಕ ವೈವಿಧ್ಯಗಳನ್ನು ಪ್ರೋತ್ಸಾಹಿಸುತ್ತಾ, ಕನ್ನಡದ ಕಟ್ಟಾಳುವಾಗಿ ಸಾಂಸ್ಕೃತಿಕ ರಾಯಭಾರಿಯಾಗಿ ಬೆಳೆದಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.
ಬಯಲು ಸೀಮೆಯ ಹುಡುಗನಬ್ಬ ಮಲೆನಾಡಿನ ಹುಡುಗಿಯ ಜೊತೆಗೂಡಿ ಕಡಲಾಚೆ ಕನಸುಗಳೊಂದಿಗೆ ನೆಲೆಯೂರಿ ಬದುಕನ್ನ ಕಟ್ಟಿಕೊಳ್ಳುವ ಜೊತೆ ಜೊತೆಗೆ ಕನ್ನಡ ತೇರನ್ನು ಎಳೆಯುತ್ತಾ ಬೆಳೆದು ನಿಂತವರು.

ಎಲ್ಲಿ ಹಬ್ಬಿದರೇನು; ಜಗವ ತಪ್ಪಿದರೇನು ಬೇರುಗಳಿರುವುದು ತಾಯ್ನಾಡು ಕರ್ನಾಟಕದಲ್ಲಿ ಎಂಬುದನ್ನು ಮಾನವಿಯ ನೆಲಗಟ್ಟಿನಲ್ಲಿ ಅರಿತು ಕೋವಿಡ್ 19 ಸಂಕಷ್ಟ ಸಂದರ್ಭದಲ್ಲಿ ಕರ್ನಾಟಕದ ಹಾಸನ, ಶಿವಮೊಗ್ಗ, ಸವದತ್ತಿ ಸೇರಿದಂತೆ ಕೆಲವು ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ಸುಮಾರು 25 ಲಕ್ಷ ರೂ. ವೆಚ್ಚದ ಆಕ್ಸಿಜನ್, ಔಷಧಿಗಳನ್ನು ವಿದೇಶದಿಂದ ಕರ್ನಾಟಕಕ್ಕೆ ಕಳುಹಿಸಿಕೊಡುವ ಮೂಲಕ ಬಡವರ ಪ್ರಾಣ ಕಾಪಾಡಿದವರು.

ಮನುಷ್ಯರಷ್ಟೇ ಮೂಕ ಪ್ರಾಣಿಗಳ ಕಾಳಜಿಯು ಮುಖ್ಯ ಎಂಬುದನ್ನರಿತು ಮೈಸೂರಿನ ಪ್ರಾಣಿ ಸಂಗ್ರಹಾಲಯಕ್ಕೆ (ಜೂ) ಪ್ರಾಣಿ ಮತ್ತು ಪಕ್ಷಿಗಳ ಆಹಾರದ ಕೊರತೆ ನೀಗಿಸಲು ಸುಮಾರು 25 ಲಕ್ಷ ರೂ. ದೇಣಿಗೆ ನೀಡಿ ಪ್ರಾಣಿ-ಪಕ್ಷಿಗಳ ಪ್ರೀತಿ ತೋರಿದವರು.

ಜೊತೆಗೆ ಕೋವಿಡ್ ಸಾಂಕ್ರಾಮಿಕ ತೊಂದರೆಗೆ ಸಿಲುಕಿದ್ದ ಭಾರತ, ನಿತ್ಯ ಪ್ರಾಣತೆತ್ತ ದುರಿತಕಾಲದಲ್ಲಿ ಕರ್ನಾಟಕಕ್ಕೆ ಆಪತ್ಬಾಂಧವರಂತೆ ನೆರವು ನೀಡಿ ನಾವು ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬಿದವರು.

ಕಲೆಯನ್ನೇ ಉಸಿರಾಡುತ್ತಿದ್ದ ಜನಪದ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕೋವಿಡ್ ಸಂದರ್ಭದಲ್ಲಿ ಕಲಾಪ್ರದರ್ಶನಕ್ಕೆ ಅವಕಾಶ ನೀಡುವ ಮೂಲಕ ಆರ್ಥಿಕ ನೆರವು ನೀಡಿದರು.

ಅಮೆರಿಕ ವಾಷಿಂಗ್ಟನ್ ಸಿಯಾಟಲ್ ಗಳಲ್ಲಿ ನೆಲೆಸಿರುವ ಕನ್ನಡಿಗ ವೈದ್ಯರನ್ನು ಸಂಘಟಿಸಿ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮಗಳು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ದ್ವಿತೀಯ ದರ್ಜೆ ನೌಕರರಿಗೆ (ಫ್ರೆಂಟ್ ಲೈನ್ ವರ್ಕರ್ಸ್) ಊಟ, ತಿಂಡಿ, ನೀರು ಇನ್ನಿತರೆ ಅಗತ್ಯ ವಸ್ತುಗಳ ವಿತರಿಸಿ ಬಡವರ ಭಾರ ಇಳಿಸಿದವರು.

ನಾವೆಲ್ಲರೂ ಒಂದೇ ಒಂದಾಗಿ ಬಾಳೋಣ ಒಂದಾಗಿ ಕೋವಿಡ್ ವಿರುದ್ಧ ಹೋರಾಡೋಣ' ಎಂಬ ಧ್ಯೇಯಕ್ಕೆ ಬದ್ಧರಾಗಿ ನೆರವಾಗಿದ್ದು ಇದೇ ಸಿಯಾಟಲ್ ಕನ್ನಡ ಸಂಘದ ಅಧ್ಯಕ್ಷರು ಅಕ್ಕ ಸಂಸ್ಥೆಯ ಖಜಾಂಚಿ ಆದ ಮನು ಗೊರೂರು.

ಇದೀಗ ಮನು ಅವರು ಮತ್ತೊಂದು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ ಅದೇನೇ ಆದರೂ ಸಪ್ತಸಾಗರದ ಆಚೆ ಕನ್ನಡ ಭವನ ನಿರ್ಮಾಣ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಇದಕ್ಕೆ ಪೂರಕ ಕೆಲಸಗಳು ಪ್ರಾರಂಭಗೊಂಡಿವೆ. ವಿದೇಶದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ಸುಲಭ ಸಾಧ್ಯದ ಕೆಲಸವಲ್ಲ.

ವಾಷಿಂಗ್ಟನ್ ನಲ್ಲಿ ಕನ್ನಡ ಕಲಿತು ಪಾಸಾದರೆ ಫಾರಿನ್ ಲಾಂಗ್ವೇಜ್ ಕ್ರೆಡಿಟ್ ಸಿಗುತ್ತೆ. ಈ ಯಶಸ್ಸಿಗೂ ಅಪಾರ ಶ್ರಮಪಟ್ಟಿದ್ದಾರೆ. ಇದಲ್ಲದೆ ಪ್ರತಿ ಏಪ್ರಿಲ್ ಅಕ್ಟೋಬರ್ ಮಾಹೆಯಲ್ಲಿ ಕನ್ನಡ ಜಾತ್ರೆಯನ್ನು ಬೃಹತ್ ಪ್ರಮಾಣದಲ್ಲಿ ಎರಡು ದಿನಗಳು ವಿಜೃಂಭಣೆಯಿಂದ ನಡೆಸಲಾಗುತ್ತದೆ.

ಕನ್ನಡಪರ ಕೆಲಸಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಕನ್ನಡ ಸಂಘದಿಂದ ಸಾಧಕಿಯನ್ನು ಗುರುತಿಸಿ ವರ್ಷದ ವಾಷಿಂಗ್ಟನ್ ಕನ್ನಡತಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ. ಇದಲ್ಲದೆ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವುದು, ಕರ್ನಾಟಕ ಕಲಾವಿದರಿಂದ ನಾಡ ಹಬ್ಬಗಳನ್ನು ಹಮ್ಮಿಕೊಳ್ಳುವುದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು, ವಿಶೇಷವಾಗಿ ಸಿಯಾಟಲ್ ನಗರದಲ್ಲಿರುವ ಎಲ್ಲಾ ಕನ್ನಡಿಗರ ಮನೆಮನೆಗೆ ತೆರಳಿ ಹೋಳಿಗೆ ನೀಡಿ ಯುಗಾದಿ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಗೆಲ್ಲ ತಾಯ್ನಾಡ ಸವಿರುಚಿ ಉಣಬಡಿಸಿ ಕನ್ನಡ ಗೀತೆಗಳ ಕೇಳಿಸುವ ಮೂಲಕ ಕರ್ನಾಟಕ ಆಹಾರ ಮೇಳ ಆಯೋಜಿಸುವುದು‌. ಆ ಮೂಲಕ ತವರು ಊರಿನಲ್ಲಿರುವ ಭಾವ ಬಿತ್ತುವುದು ಅವರ ಉದ್ದೇಶ. ಹೀಗೆ ಒಂದಿಲ್ಲೊಂದು ಕಾರಣವಿಟ್ಟುಕೊಂಡು ಚದುರಿ ಹೋಗಿದ್ದ ಎಲ್ಲಾ ಕನ್ನಡಿಗರನ್ನು ವಿದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸಂಘಟಿಸುವುದು ಸಣ್ಣ ಮತ್ತು ಸುಲಭವಾದುದಲ್ಲ ಎಂಬುದು ಗಮನಾರ್ಹ.

ಅಕ್ಕ ಸಂಸ್ಥೆಯ ಖಜಾಂಚಿ ಮತ್ತು ಬೋರ್ಡ್ ಆಫ್ ಡೈರೆಕ್ಟರ್ ಜವಾಬ್ದಾರಿಯನ್ನು ಹೊತ್ತಿರುವುದರಿಂದ ಈ ಬಾರಿ ಸಿಯಾಟಲ್ ನಲ್ಲಿ ಅಕ್ಕ ಸಮ್ಮೇಳನ ನಡೆಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರಿಗೆ ಮತ್ತೊಂದು ಮಹತ್ವದ ಕನಸೆಂದರೆ ವಿದೇಶದಲ್ಲಿ ದೊರೆಯುತ್ತಿರುವ ಮೌಲ್ಯಾಧಾರಿತ ಉಚಿತ ಶಿಕ್ಷಣ ಯೋಜನೆ ಭಾರತದಲ್ಲಿಯೂ ಜಾರಿಯಾಗಬೇಕು ಎನ್ನುವುದು. ಅವರಿಗೆ ಎಲ್ಲ ರೀತಿಯ ಶುಭ ಹಾರೈಸುತ್ತಾ ಮತ್ತಷ್ಟು ಪ್ರಶಸ್ತಿಗಳು ಅವರನ್ನು ಅರಸಿ ಬರಲಿ ಮತ್ತಷ್ಟು ಸಾಧನೆಯ ಹಾದಿಯಲ್ಲಿ ಸಾಗಲಿ.

ವರದಿ: ಗೊರೂರು ಪಂಕಜ