ಬಿಜೆಪಿ ಸರಕಾರಕ್ಕೆ ಮರಣ ಶಾಸನ ಬರೆಯಲಿದೆಯೇ ಆ ದಾಖಲೆಗಳು?

ಸಿದ್ದರಾಮಯ್ಯನವರ ಸರಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿ ಪಕ್ಷದ ಸಾರ್ವಜನಿಕ ಸಭೆಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿದ್ದು ಸರಕಾರವನ್ನು 'ದಸ್ ಪರ್ಸೆಂಟ್ ಕಾ ಸರಕಾರ್' ಎಂದು ಲೇವಡಿ ಮಾಡಿ ಹೋಗಿದ್ದರು. ಇದನ್ನು ರಾಜ್ಯ ಬಿಜೆಪಿ ನಾಯಕರು ಮುಂದುವರಿಸಿಕೊಂಡು ಬಂದರು. ಈಗ, ರಾಜ್ಯ ಬಿಜೆಪಿ ಸರಕಾರದ ಮೇಲೆ ಹತ್ತು ಹಲವು ಗುರುತರ ಆರೋಪಗಳಿವೆ. ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ ಕೋವಿಡ್ ಪರಿಕರ ಖರೀದಿಯಿಂದ ಹಿಡಿದು, ಹಲವಾರು ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದವು.
ಇನ್ನು, ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರು ನೇರವಾಗಿ ಕಮಿಷನ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು. ಲೇಟೆಸ್ಟ್ ಆಗಿ ಬಿಟ್ ಕಾಯಿನ್ ವಿಚಾರದಲ್ಲೂ ಬೊಮ್ಮಾಯಿ ಸರಕಾರ ಉರುಳುತ್ತದೆ ಎನ್ನುವ ಮಾತನ್ನು ಪ್ರಿಯಾಂಕ್ ಖರ್ಗೆ ಆದಿಯಾಗಿ ಕಾಂಗ್ರೆಸ್ಸಿನವರು ಹೇಳಿದ್ದರು.
ಆದರೆ, ಯಾವ ವಿಚಾರದಲ್ಲೂ ಕಾಂಗ್ರೆಸ್ಸಿನವರಿಗೆ ದಾಖಲೆ ಸಮೇತ ಬಿಜೆಪಿಯನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಲಾಗಲಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಆದರೆ, ಈಗ, ಗುತ್ತಿಗೆದಾರರ ಸಂಘವು ನೇರವಾಗಿ ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯನ್ನು ನೀಡಿ, ಸರಕಾರ ಉರುಳಿ ಹೋಗುತ್ತದೆ ಹುಷಾರ್! ಎನ್ನುವ ಮಾತನ್ನು ಹೇಳಿದೆ. ಬೊಮ್ಮಾಯಿಯವರನ್ನು ದೆಹಲಿಗೆ ಪ್ರಧಾನಿ ಕರೆಸಿಕೊಂಡರು ಎನ್ನುವ ಸುದ್ದಿ
ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳ ಹಣದ ದಾಹ ಎಲ್ಲೇ ಮೀರಿದಾಗ, ರಾಜ್ಯ ಗುತ್ತಿಗೆದಾರರ ಸಂಘ, ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದು ಭ್ರಷ್ಟಾಚಾರದ ಕರಾಳ ಮುಖವನ್ನು ಪರಿಚಯ ಮಾಡಿಸುವ ಪ್ರಯತ್ನವನ್ನು ಮಾಡಿತ್ತು. ಈ ಬೆಳವಣಿಗೆ ನಡೆದ ಕೆಲವು ದಿನಗಳ ನಂತರ, ರಾಜ್ಯದ ಹಲವು ಗುತ್ತಿಗೆದಾರರ ಮನೆಯ ಮೇಲೆ ಇಡಿ, ಐಟಿ ದಾಳಿಗಳನ್ನು ನಡೆದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ದೆಹಲಿಗೆ ಪ್ರಧಾನಿ ಕರೆಸಿಕೊಂಡರು ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು. ಗುತ್ತಿಗೆದಾರರಿಂದ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ
ಗುತ್ತಿಗೆದಾರರಿಂದ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎನ್ನುವ ಆರೋಪ ಇರುವುದು ಗೊತ್ತಿರುವ ವಿಚಾರ. ಟೆಂಡರ್ ಕರೆಯುವ ಮುನ್ನವೇ ಭ್ರಷ್ಟಾಚಾರ ಅನಾವರಣಗೊಳ್ಳುತ್ತದೆ, ಯಾವಯಾವ ಹಂತದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪರ್ಸೆಂಟ್ ಕಮಿಷನ್ ನೀಡಬೇಕಾತ್ತದೆ ಎನ್ನುವುದನ್ನು ಸವಿಸ್ತಾರವಾಗಿ ಸಂಘದ ಪದಾಧಿಕಾರಿಗಳು ವಿವರಿಸಿದ್ದರು. ಈಗ, ಮತ್ತೆ ಎಚ್ಚರಿಕೆಯನ್ನು ಸಂಘ ನೀಡಿರುವುದರಿಂದ, ಕೊರೊನಾ ಹಾವಳಿಯ ನಡುವೆಯೂ ಈ ವಿಚಾರ ಮುನ್ನಲೆಗೆ ಬಂದು ಸರಕಾರಾಕ್ಕೆ ಗಂಢಾಂತರ ಎದುರಾಗುವ ಸಾಧ್ಯತೆಯಿಲ್ಲದಿಲ್ಲ.
ಕಾಮಗಾರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ದಾಖಲೆ
"ಸರಕಾರದ ಕಾಮಗಾರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಅದು ಬಿಜೆಪಿ ಸರಕಾರದ ಪಾಲಿಗೆ ಮರಣ ಶಾಸನವಾಗುತ್ತದೆ. ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಕಮಿಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ನಾಲ್ವರು ಅಧಿಕಾರಿಗಳು, ಸಚಿವರು, ಶಾಸಕರೂ ಸೇರಿ 25 ಜನ ಪ್ರತಿನಿಧಿಗಳ ಹೆಸರನ್ನು ಬಯಲು ಪಡಿಸಬೇಕಾಗುತ್ತದೆ"ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನೇರವಾಗಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ "ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಭೆಯನ್ನು ನಡೆಸಿ, ಪ್ರತಿಭಟನೆಗೆ ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ ಹಿನ್ನಲೆಯಲ್ಲಿ ಇದನ್ನು ರದ್ದು ಪಡಿಸಲಾಯಿತು. ನಾವೆಲ್ಲಾ ಸಭೆ ಸೇರಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪತ್ರ ಚಳುವಳಿ ನಡೆಸಲು ನಿರ್ಧರಿಸಿದ್ದೇವೆ. ಮಾರ್ಚ್ ಹತ್ತರ ನಂತರ ಸಮಯಾವಕಾಶ ಸಿಕ್ಕರೆ, ಪ್ರಧಾನಿಯವರನ್ನು ಭೇಟಿಯಾಗಿ ದೂರು ಸಲ್ಲಿಸಲು ಯೋಜನೆ ರೂಪಿಸಿಕೊಳ್ಳುತ್ತಿದ್ದೇವೆ. ಹಲವು ಬಾರಿ ಸಿಎಂ ಭೇಟಿಗೆ ಮನವಿ ಮಾಡಿದ್ದರೂ, ನಮಗೆ ಅವಕಾಶ ಸಿಕ್ಕಿಲ್ಲ. ನಮ್ಮ ತಾಳ್ಮೆಗೂ ಒಂದು ಮಿತಿಯಿದೆ" ಎಂದು ಕೆಂಪಣ್ಣ ಹೇಳುವ ಮೂಲಕ, ಈ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸದ್ದನ್ನು ಮಾಡುವ ಮುನ್ಸೂಚನೆ ಸಿಕ್ಕಿದೆ. (ಚಿತ್ರದಲ್ಲಿ : ಡಿ.ಕೆಂಪಣ್ಣ)