ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ : ಬಸ್ ಸಂಚಾರ ವಿರಳ, ರಸ್ತೆಗಳು ಖಾಲಿ ಖಾಲಿ

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ : ಬಸ್ ಸಂಚಾರ ವಿರಳ, ರಸ್ತೆಗಳು ಖಾಲಿ ಖಾಲಿ
ಕೊರೊನಾ ವೈರಸ್ (Corona Virus) ಮತ್ತು ಓಮೈಕ್ರಾನ್ (Omicron) ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ (Weekend Curfew) ಹೇರಿದೆ. ಕೆಲ ವಿನಾಯ್ತಿಗಳ ಜೊತೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಬೆಂಗಳೂರು ಪೊಲೀಸರು (Bengaluru Police) ರಸ್ತೆಗೆ ಇಳಿದಿದ್ದು, ಅನಾವಶ್ಯಕವಾಗಿ ತಿರುಗಾಡುತ್ತಿರುವವರಿಗೆ ತಿಳಿ ಹೇಳಿ ಕಳುಹಿಸುತ್ತಿದ್ದಾರೆ.
ಜೊತೆಗೆ ಕಾರಣವಿಲ್ಲದೇ ಸಂಚರಿಸುತ್ತಿರುವ ಜನರನ್ನು ಕೊರೊನಾ ಪರೀಕ್ಷೆಗೆ (COVID Test) ಒಳಪಡಿಸಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಶೇ.10ರಷ್ಟು ಬಿಎಂಟಿಸಿ ಬಸ್ (BMTC Bus) ಗಳು ರಸ್ತೆಗೆ ಇಳಿದಿದ್ದು, ಜನರು ತೊಂದರೆ ಅನುಭವಿಸುವಂತಾಯ್ತು. ವೀಕೆಂಡ್ ಕರ್ಫ್ಯೂ ನಡುವೆ ಕೈಗಾರಿಕೆಗಳಿಗೆ ನಿರ್ವಹಣೆ ನಡೆಸಲು ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಆದ್ರೆ ಕಾರ್ಮಿಕರಿಗೆ ತೆರಳಲು ಬಸ್ ಗಳಿಲ್ಲದ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.

ಬಹುತೇಕ ಬೆಂಗಳೂರು ಸ್ತಬ್ಧವಾಗಿದ್ದು, ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿದೆ. ಎಂಜಿ ರೋಡ್, ಕೆ.ಆರ್.ಮಾರ್ಕೆಟ್, ಚಿಕ್ಕಪೇಟೆ, ಬ್ರಿಗೇಡ್ ರೋಡ್, ಕಾರ್ಪೋರೇಷನ್ ಸರ್ಕಲ್, ನೃಪತುಂಗ ರಸ್ತೆ, ಮೈಸೂರು ರೋಡ್, ಮೆಜೆಸ್ಟಿಕ್ ಸೇರಿದಂತೆ ಎಲ್ಲ ರಸ್ತೆಗಳಲ್ಲಿ ವಿರಳ ಸಂಚಾರ ಇದೆ. ಇನ್ನೂ ರಾಜಾಜಿ ನಗರದಲ್ಲಿ ಸಚಿವ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ವೇಳೆ ಸಚಿವರ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರುವ ಮೂಲಕ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರು.

: Karnataka Weekend Curfew: ಎರಡು ದಿನ ಏನಿರುತ್ತೆ? ಏನಿರಲ್ಲ?

ಶಾಸಕ ಅಶೋಕ್ ನಾಯ್ಕ್ ಒಡೆತನದ ಶಾಲೆ ಆರಂಭ

ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿರೋದರಿಂದ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಆದ್ರೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರ ಒಡೆತನದ ಅಕ್ಷರ್ ಶಾಲೆ ಮತ್ತು ಕಾಲೇಜು ಆರಂಭವಿದೆ. ರಾಜ್ಯ ಸರ್ಕಾರದ ಆದೇಶಕ್ಕೆ ಪಕ್ಷದ ಶಾಸಕರೇ ಕಿಮ್ಮತ್ತು ನೀಡಿಲ್ಲ.

ಮೈಸೂರಿನಲ್ಲಿ ಕ್ರಿಕೆಟ್ ಪಂದ್ಯ

ವೀಕೆಂಡ್ ಕರ್ಪ್ಯೂನಲ್ಲೂ ಭರ್ಜರಿ ಕ್ರಿಕೆಟ್ ಆಡಲು ಯುವಕರು ಒಂದೆಡೆ ಸೇರಿರುವ ದೃಶ್ಯಗಳು ಕಂಡು ಬಂದಿವೆ. ಮೈಸೂರಿನ ದೊಡ್ಡ ಕೆರೆ ಮೈದಾನದಲ್ಲಿ ಕ್ರಿಕೆಟ್ ನಡೆಯುತ್ತಿತ್ತು. ವಿಷಯ ತಿಳಿದು ನಜರಾಬಾದ್ ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಯುವಕರು ಓಡಿ ಹೋಗಿ ಮನೆ ಸೇರಿಕೊಂಡಿದ್ದಾರೆ.

ಇನ್ನೂ ಕೆಲ ಯುವಕರಿಗೆ ವೀಕೆಂಡ್ ಕರ್ಫ್ಯೂ ವೇಳೆ ಹೊರಗೆ ಬರಬಾರದು, ಗುಂಪಾಗಿ ಕುಳಿತುಕೊಳ್ಳಬಾರದು ಎಂದು ಪೊಲೀಸರು ತಿಳಿ ಹೇಳಿದ್ದಾರೆ. ಪೊಲೀಸರ ಮಾತಿನಂತೆ ಯುವಕರೆಲ್ಲರೂ ಆಟ ನಿಲ್ಲಿಸಿದ್ದಾರೆ.

: Omicron: ನಿಮ್ಮ ಚರ್ಮ, ತುಟಿ, ಉಗುರುಗಳ ಮೇಲೆ ಈ ರೀತಿಯಾಗಿದ್ರೆ ಅದು ಓಮೈಕ್ರಾನ್​ ಎಂದರ್ಥ

ಬೆಳಗಾವಿಯಲ್ಲಿ ಪೊಲೀಸರ ತಪಾಸಣೆ

ಬೆಳಗಾವಿ ಕಿರ್ಲೋಸ್ಕರ್ ರಸ್ತೆ,‌ ಮಾರುತಿಗಲ್ಲಿ, ರವಿವಾರ‌ ಪೇಟೆ ಸಂಪೂರ್ಣ ಖಾಲಿ ಖಾಲಿಯಾಗಿರುವ ದೃಶ್ಯ ಕಂಡು ಬಂದಿದೆ. ಮೆಡಿಕಲ್, ಬೇಕರಿ ಹೊರತು ಪಡಿಸಿ ಬಹುತೇಕ ಅಂಗಡಿ ಮುಂಗಟ್ಟು ಬಂದ್ ಆಗಿವೆ. ಮಾರುಕಟ್ಟೆ ಪ್ರವೇಶದ್ವಾರದಲ್ಲಿ ಪೊಲೀಸ್ ತಪಾಸಣೆ ನಡೆಸುತ್ತಿದ್ದು, ಮಾಸ್ಕ್ ಇಲ್ಲದೇ ಇರೋವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತದೆ.

ರಾಯಚೂರಿನಲ್ಲಿ ಜನರು ಡೋಂಟ್ ಕೇರ್

ಇನ್ನು ರಾಯಚೂರು ಜಿಲ್ಲೆಯಲ್ಲಿ ಜನರು ವೀಕೆಂಡ್ ಕರ್ಫ್ಯೂಗೆ ಡೋಂಟ್ ಕೇರ್ ಅಂದಿದ್ದಾರೆ. ಬೆಳಗ್ಗೆ ಎಂದಿನಂತೆ ಜನರ ಓಡಾಟ ಇತ್ತು. ಬೆಳಗ್ಗೆ 10 ಗಂಟೆಯ ನಂತರ ಜನ ಸಂಚಾರ ಕಡಿಮೆಯಾಗಿದ್ದು, ಪೊಲೀಸರು ರೌಂಡ್ಸ್ ಹಾಕುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ವೇಳೆ ಮದ್ಯ ಮಾರಾಟಕ್ಕೆ ನಿಷೇಧ ಹಾಕಲಾಗಿದೆ. ಆದ್ರೆ ಪಾನ್ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡು ಬಂತು.

ಪ್ರವಾಸಿ ಸ್ಥಳಗಳು ಖಾಲಿ ಖಾಲಿ

ವೀಕೆಂಡ್ ಕರ್ಫ್ಯೂ ಹಿನ್ನೆಲೆ ರಾಜ್ಯದ ಎಲ್ಲ ಪ್ರವಾಸಿ ಸ್ಥಳಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ. ಹೆದ್ದಾರಿಗಳಲ್ಲಿಯೂ ವಾಹನಗಳ ಸಂಖ್ಯೆ ಕಡಿಮೆಯಾಗಿದ್ದು, ವ್ಯಾಪರಿಗಳು ನಷ್ಟ ಅನುಭವಿಸುವಂತಾಗಿದೆ. ಇನ್ನುಳಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ ವೀಕೆಂಡ್ ಕರ್ಫ್ಯೂಗೆ ಜನರು ಬೆಂಬಲ ಸೂಚಿಸಿದ್ದಾರೆ.