ರಣಜಿ | ವೆಂಕಟೇಶ್ ದಾಳಿ: ಉತ್ತರಾಖಂಡ ನಿರುತ್ತರ

ರಣಜಿ | ವೆಂಕಟೇಶ್ ದಾಳಿ: ಉತ್ತರಾಖಂಡ ನಿರುತ್ತರ

ಬೆಂಗಳೂರು: ಪದಾರ್ಪಣೆಯ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ ಮುರಳೀಧರ್ ವೆಂಕಟೇಶ್ ದಾಳಿಗೆ ಉತ್ತರಾಖಂಡ ತಂಡವು ದೂಳೀಪಟವಾಯಿತು. ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದ ಮೊದಲ ದಿನವೇ ಆತಿಥೇಯ ಕರ್ನಾಟಕ ಪ್ರಥಮ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ವಾಸುಕಿ ಕೌಶಿಕ್ ಗಾಯಗೊಂಡಿದ್ದ ಕಾರಣ ವಿಶ್ರಾಂತಿ ಪಡೆದರು. ಅವರ ಬದಲಿಗೆ ಮೈಸೂರಿನ ಹುಡುಗ ವೆಂಕಟೇಶ್‌ ಸ್ಥಾನ ಪಡೆದರು. ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ವೆಂಕಟೇಶ್ (14-3-36-5) ದಾಳಿಯ ಮುಂದೆ ಉತ್ತರಾಖಂಡ ತಂಡವು 55.4 ಓವರ್‌ಗಳಲ್ಲಿ 116 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಚಹಾ ವಿರಾಮಕ್ಕೆ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ದಿನದಾಟದ ಮುಕ್ತಾಯಕ್ಕೆ 26 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 123 ರನ್ ಗಳಿಸಿತು. 7 ರನ್‌ ಮುನ್ನಡೆ ಸಾಧಿಸಿತು. ಆರ್. ಸಮರ್ಥ್ (ಬ್ಯಾಟಿಂಗ್ 54) ಮತ್ತು ಮಯಂಕ್ (ಬ್ಯಾಟಿಂಗ್ 65) ಕ್ರೀಸ್‌ನಲ್ಲಿದ್ದಾರೆ.

ಉತ್ತರಾಖಂಡ ತಂಡವು ಎಂಟರ ಘಟ್ಟಕ್ಕೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜೀವನ್‌ಜ್ಯೋತ್ ಸಿಂಗ್ ಅವರ ವಿಕೆಟ್ ಗಳಿಸುವ ಮೂಲಕ ವಿದ್ವತ್ ಕರ್ನಾಟಕದ ಖಾತೆ ತೆರೆದರು. 12ನೇ ಓವರ್‌ನಲ್ಲಿ ವೆಂಕಟೇಶ್ ಎಸೆತದಲ್ಲಿ ಅವನೀಶ್ ಸುಧಾ ಕ್ಯಾಚ್‌ ಪಡೆದ ನಿಕಿನ್ ಸಂಭ್ರಮಿಸಿದರು. ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ವಿಕೆಟ್ ಗಳಿಸಿದ ವೆಂಕಟೇಶ್ ಕುಣಿದಾಡಿದರು.

ಉತ್ತರಾಖಂಡದಲ್ಲಿ ಆಡುತ್ತಿರುವ ಬೆಂಗಳೂರಿನ ದಿಕ್ಷಾಂಶು ನೇಗಿ, ಅಖಿಲ್ ರಾವತ್ ಮತ್ತು ಅಭಯ್ ನೇಗಿ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು. ದಿನದ ಆರಂಭಿಕ ಹಂತದಲ್ಲಿ ಪಿಚ್‌ನಲ್ಲಿ ಚೆಂಡಿನ ಪುಟಿತ ಚೆನ್ನಾಗಿರುವುದನ್ನು ಬಳಸಿಕೊಂಡ ವೆಂಕಟೇಶ್ ಸಫಲರಾದರು.

ಊಟದ ವಿರಾಮಕ್ಕೆ 64 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಉತ್ತರಾಖಂಡ ತಂಡವು ನೂರರ ಗಡಿ ದಾಟುವಲ್ಲಿ ಕುನಾಲ್ ಚಾಂಡಿಲಾ (31; 103ಎ) ಅವರ ಏಕಾಂಗಿ ಹೋರಾಟ ನೆರವಾಯಿತು. ಅವರ ವಿಕೆಟ್ ಕೂಡ ವೆಂಕಟೇಶ್ ಪಾಲಾಯಿತು. ಐದು ವಿಕೆಟ್ ಪೂರೈಸಿದ ಸಂಭ್ರಮದಲ್ಲಿ ಕೆಂಪುಚೆಂಡನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸುಮಾರು 150-200 ಜನರತ್ತ ತೋರಿಸಿ ಸಂಭ್ರಮಿಸಿದರು.

ಇನ್ನೊಂದು ಬದಿಯಿಂದ ವೈಶಾಖ ಮತ್ತು ವಿದ್ವತ್ ಕೂಡ ಒತ್ತಡ ಹೆಚ್ಚಿಸಿದರು. ಮಧ್ಯಮಕ್ರಮಾಂಕದ ಪ್ರಮುಖ ಬ್ಯಾಟರ್ ವಿದ್ವತ್ ನೇರ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಬಿಸಿಲು ಚುರುಕಾಗುತ್ತಿದಂತೆ ಆಫ್‌ಸ್ಪಿನ್ನರ್ ಕೆ.ಗೌತಮ್ ಎಸೆತಗಳು ಒಂದಿಷ್ಟು ತಿರುವು ಪಡೆಯಲು ಆರಂಭಿಸಿದವು. ಇದನ್ನು ಗ್ರಹಿಸಿದ ಗೌತಮ್ ಎರಡು ವಿಕೆಟ್ ಗಳಿಸಿ ಉತ್ತರಾಖಂಡದ ಇನಿಂಗ್ಸ್‌ಗೆ ಮಂಗಳ ಹಾಡಿದರು. 56ನೇ ಓವರ್‌ನಲ್ಲಿ ಗೌತಮ್ ತಮ್ಮ ಎಸೆತವನ್ನು ನೇರವಾಗಿ ಹೊಡೆದ ದೀಪಕ್ ಧಪೊಲಾ ಅವರ ಕ್ಯಾಚ್ ಪಡೆದು ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಉತ್ತರಾಖಂಡ: 55.4 ಓವರ್‌ಗಳಲ್ಲಿ 116 (ಅವನೀಶ್ ಸುಧಾ 17, ಕುನಾಲ್ ಚಾಂಡೇಲಾ 31, ಆದಿತ್ಯ ತಾರೆ 14, ಅಖಿಲ್ ರಾವತ್‌ 14; ವಿದ್ವತ್ ಕಾವೇರಪ್ಪ 17ಕ್ಕೆ 2, ಎಂ. ವೆಂಕಟೇಶ್‌ 36ಕ್ಕೆ 5, ಕೆ. ಗೌತಮ್‌ 22ಕ್ಕೆ 2). ಕರ್ನಾಟಕ: 26 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 123 (ಆರ್‌. ಸಮರ್ಥ್ ಬ್ಯಾಟಿಂಗ್ 54, ಮಯಂಕ್ ಅಗರವಾಲ್ ಬ್ಯಾಟಿಂಗ್ 65).