ಮೊದಲ ದಿನವೇ ಕೋವಿಡ್ ಲಸಿಕೆ ಪಡೆದ 40 ಲಕ್ಷ ಮಕ್ಕಳು

ನವದೆಹಲಿ, ಜನವರಿ 04; ಭಾರತದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳ ಕೋವಿಡ್ ಲಸಿಕಾಕರಣ ಅಭಿಯಾನ ಆರಂಭವಾಗಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಲಸಿಕಾ ಅಭಿಯಾನದ ಬಗ್ಗೆ ಟ್ವೀಟ್ ಮಾಡಿದ್ದಾರೆ. "ವೆಲ್ ಡನ್ ಯಂಗ್ ಇಂಡಿಯಾ ಸುಮಾರು 40 ಲಕ್ಷ 15 ರಿಂದ 18 ವಯೋಮಿತಿಯ ಮಕ್ಕಳು ಮೊದಲ ದಿನದ ಲಸಿಕಾ ಅಭಿಯಾನದಲ್ಲಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ" ಎಂದು ಹೇಳಿದ್ದಾರೆ.
ಭಾನುವಾರ ಎಲ್ಲಾ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ಸಚಿವರು ಮಕ್ಕಳಿಗೆ ಲಸಿಕೆ ನೀಡಲು ವಿಶೇಷ ಕ್ಯಾಂಪ್ ಆಯೋಜನೆ ಮಾಡಿ. ವಯಸ್ಕರು ಮತ್ತು ಮಕ್ಕಳ ಲಸಿಕೆ ನೀಡುವ ಪ್ರಕ್ರಿಯೆ ಒಂದೇ ಕಡೆ ನಡೆಸಬೇಡಿ ಎಂದು ಸಲಹೆ ನೀಡಿದ್ದರು.
ನವದೆಹಲಿಯಲ್ಲಿ ಸಂಜೆ 6 ಗಂಟೆಯ ತನಕ 20,998 ಮಕ್ಕಳು ಲಸಿಕೆ ಪಡೆದಿದ್ದಾರೆ. ಉತ್ತರ ದೆಹಲಿಯಲ್ಲಿ ಅತಿ ಹೆಚ್ಚು ಎಂದರೆ 3,687 ಮಕ್ಕಳು ಮತ್ತು ಕೇಂದ್ರ ದೆಹಲಿಯಲ್ಲಿ ಅತಿ ಕಡಿಮೆ ಎಂದರೆ 739 ಮಕ್ಕಳು ಲಸಿಕೆ ಪಡೆದಿದ್ದಾರೆ.
ಪಂಜಾಬ್ ರಾಜ್ಯದಲ್ಲಿ 15 ರಿಂದ 18 ವರ್ಷ ವಯೋಮಿತಿಯ 3071 ಮಕ್ಕಳು ಲಸಿಕೆ ಪಡೆದಿದ್ದಾರೆ. ಚಂಡೀಗಢ್‌ನಲ್ಲಿ 10 ಕೇಂದ್ರಗಳಲ್ಲಿ 1826 ಡೋಸ್ ಲಸಿಕೆ ನೀಡಲಾಗಿದೆ. ಕೇರಳದಲ್ಲಿ 38,417 ಮಕ್ಕಳು ಲಸಿಕೆ ಪಡೆದಿದ್ದಾರೆ. ರಾಜಧಾನಿ ತಿರುವನಂತಪುರಂನಲ್ಲಿ 9,338 ಮಕ್ಕಳು ಮೊದಲ ಡೋಸ್ ಪಡೆದರು.
ಕರ್ನಾಟಕದಲ್ಲಿ ಎಷ್ಟು? ಲಸಿಕೆ ಅಭಿಯಾನದ ಮೊದಲ ದಿನ ಕರ್ನಾಟಕದಲ್ಲಿ 3.80 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಇಲಾಖೆ ಆಯುಕ್ತ ಡಿ. ರಣದೀಪ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಮೊದಲ ದಿನವೇ 3,80,133 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಮೊದಲ ದಿನ 6,38,891 ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು. ಈ ಪೈಕಿ ಶೇ 59ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಯಾದಗಿರಿ ಜಿಲ್ಲೆಯಲ್ಲಿ ಶೇ 18, ಬೆಂಗಳೂರು ನಗರ ಶೇ 27, ಹಾವೇರಿ ಶೇ 273, ಧಾರವಾಡ ಶೇ 225, ಬೆಳಗಾವಿ ಶೇ 220, ಚಿಕ್ಕಮಗಳೂರು ಶೇ 136, ಹಾಸನ ಶೇ 128, ಉಡುಪಿಯಲ್ಲಿ ಶೇ 103ರಷ್ಟು ಲಸಿಕೆ ವಿತರಣೆ ಮಾಡಲಾಗಿದೆ.
15 ರಿಂದ 18 ವರ್ಷದ ಮಕ್ಕಳಿಗೆ ಸದ್ಯ ಕೋವ್ಯಾಕ್ಸಿನ್ ಮಾತ್ರ ನೀಡಲಾಗುತ್ತಿದೆ. ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ. 2007 ಮತ್ತು ಅದಕ್ಕೂ ಮೊದಲು ಜನಿಸಿದವರು ಲಸಿಕೆ ಪಡೆಯಲು ಅರ್ಹರು.
ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಜನವರಿ 3ರ ಸೋಮವಾರ ಲಸಿಕಾ ಅಭಿಯಾನ ಆರಂಭವಾಗಲಿದೆ. ಇದರಿಂದಾಗಿ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಹೋಗುವ ಮಕ್ಕಳ ಆತಂಕ ಮತ್ತು ಅವರ ಪೋಷಕರ ಆತಂಕ ಕಡಿಮೆ ಆಗಲಿದೆ ಎಂದು ಹೇಳಿದ್ದರು.
ದೇಶದಲ್ಲಿ ಕೋವಿಡ್ ಲಸಿಕೆ ಪಡೆಯುವ ಮಕ್ಕಳ ಸಂಖ್ಯೆ ಸುಮಾರು 3 ಕೋಟಿ ಎಂದು ಅಂದಾಜಿಸಲಾಗಿದೆ. ಸೋಮವಾರ ಎಲ್ಲಾ ರಾಜ್ಯಗಳಲ್ಲಿ ಲಸಿಕಾಕರಣಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶಾಲೆ ಮತ್ತು ಕಾಲೇಜುಗಳ ಆವರಣದಲ್ಲಿಯೇ ಲಸಿಕೆ ನೀಡಲಾಗುತ್ತಿದೆ.