ಕರ್ನಾಟಕದಿಂದ ಕಳ್ಳಸಾಗಾಣಿಯಾಗುತ್ತಿದ್ದ 26 ಕೋಟಿ ರೂ. ಮೌಲ್ಯದ ತಿಮಿಂಗಿಲ ಅಂಬರ್ಗಿಸ್ ವಶ
ಮುಂಬೈ, ಜು.13- ಕರ್ನಾಟಕದಿಂದ ಕಳ್ಳಸಾಗಾಣಿಕೆಯ ಮೂಲಕ ತರಲಾದ ಸುಮಾರು 26 ಕೋಟಿ ರೂ. ಮೌಲ್ಯದ ತಿಮಿಂಗಿಲದ ಅಂಬರ್ಗಿಸನ್ನು ಮಹಾರಾಷ್ಟ್ರದ ಥಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಿಮಿಂಗಲ ವಾಂತಿ ಮಾಡುವ ಯೂರಿಯಾವನ್ನು ಅಂಬರ್ಗಿಸ್ ಎಂದು ಕರೆಯಲಾಗುತ್ತಿದ್ದು, ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಗೆ ಬಳಸಲಾಗುತ್ತದೆ. ಅತ್ಯಂತ ದುಬಾರಿ ಮೌಲ್ಯದ ಅಂಬರ್ಗಿಸನ್ನು ಕರ್ನಾಟಕದಿಂದ ತರಲಾಗಿದೆ ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಥಾಣೆಯ ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಗಜೇಂದ್ರ ಹೀರೆ ಅವರು, ಕೆಲ ದಿನಗಳ ಹಿಂದೆ ನಡೆಸಲಾದ ದಾಳಿಯಲ್ಲಿ 27 ಕೆಜಿ ತೂಕದ ಅಂಬರ್ಗಿಸನ್ನು ವಶಪಡಿಸಿಕೊಳ್ಳಲಾಗಿದ್ದು, ಐವರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ನಾಲ್ವರು ಮಹಾರಾಷ್ಟ್ರದವರಾಗಿದ್ದು, ಒಬ್ಬ ಕರ್ನಾಟಕದವನಾಗಿದ್ದಾನೆ.
ರಾಜೇಂದ್ರ ಮಿಸ್ತ್ರಿ, ದಿವಾಕರಶೆಟ್ಟಿ, ದಾದಾಬು ಗನ್ವಾತೆ, ಕಿರಿತಾಬಿ ವಾದ್ವಾನೆ, ಸಯ್ಯದ್ ಸಿಂಗಾತ್‍ವುಲ್ಲಾ ಎಂಬ ಆರೋಪಿಗಳನ್ನು ಮುಂಬೈನ ಮಲಾಡ್ ಮತ್ತು ಅಂಧೇರಿ ಪ್ರದೇಶದಿಂದ ಬಂಧಿಸಲಾಗಿದೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಎಫ್ ತಿಳಿಸಿದ್ದಾರೆ.
ಅಂಬರ್ಗಿಸ್ ನಿಷೇಧಿತ ವಸ್ತುವಾಗಿದ್ದು, ಅದನ್ನು ಕರ್ನಾಟಕದಲ್ಲಿ ದಾಸ್ತಾನು ಮಾಡಲಾಗಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ವಿಶೇಷ ತಂಡವನ್ನು ಹೆಚ್ಚಿನ ತನಿಖೆಗಾಗಿ ಕರ್ನಾಟಕಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.