11 ಬಾರಿ ಶಾಸಕರಾಗಿದ್ದ ಗಣಪತ್‍ರಾವ್ ನಿಧನ

11 ಬಾರಿ ಶಾಸಕರಾಗಿದ್ದ ಗಣಪತ್‍ರಾವ್ ನಿಧನ

ಮುಂಬೈ,ಜು.31- ಹನ್ನೊಂದು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸುದೀರ್ಘ ಅವಧಿ ಜನಪ್ರತಿನಿಧಿಯಾಗಿ ಕೆಲಸ ಮಾಡಿದ ಗಣಪತ್‍ರಾವ್ ದೇಶ್‍ಮುಖ್ (94) ಮೃತಪಟ್ಟಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಿತ್ತಕೋಶದಲ್ಲಿ ಕಲ್ಲುಗಳಿದ್ದ ಕಾರಣಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

1962ರಿಂದ ಸೊಲ್ಲಾಪುರ ಜಿಲ್ಲೆಯ ಸಂಗೋಳ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮಹಾರಾಷ್ಟ್ರದಲ್ಲಿ ಸುಮಾರು 54 ವರ್ಷಗಳ ಕಾಲ ಸುದೀರ್ಘವಾಗಿ ಶಾಸಕರಾಗಿ ಸೇವೆ ಸಲ್ಲಿಸಿದ ದಾಖಲೆ ಅವರ ಹೆಸರಿಗಿದೆ. 1972ರಲ್ಲಿ ಸೋಲನ್ನು ಕಂಡಿದ್ದರು. ಆದರೆ, ಎರಡೇ ವರ್ಷಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 1995ರಲ್ಲಿ 192 ಮತಗಳಿಂದ ಸೋಲು ಕಂಡಿದ್ದರು. 2019ರವರೆಗೂ ರೈತರು ಮತ್ತು ಕಾರ್ಮಿಕರ ಪಕ್ಷ (ಪಿಡಬ್ಲ್ಯೂಪಿ)ದ ಮೂಲಕ ಸಂಗೋಳ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

1978ರಲ್ಲಿ ಎನ್‍ಸಿಪಿಯ ಶರದ್‍ಪವಾರ್, 1999ರಲ್ಲಿ ಕಾಂಗ್ರೆಸ್‍ನ ವಿಲಾಸ್‍ರಾವ್ ದೇಶ್‍ಮುಖ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ತಮ್ಮ ಪಕ್ಷದಿಂದ ಕಾಂಗ್ರೆಸ್ ಹಾಗೂ ಎನ್‍ಸಿಪಿ ಸರ್ಕಾರಕ್ಕೆ ಬೆಂಬಲ ಕೊಟ್ಟು ಮೈತ್ರಿ ಸರ್ಕಾರ ರಚಿಸುವ ಮೂಲಕ ಸಚಿವರಾಗಿದ್ದರು.

ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್‍ಠಾಕ್ರೆ, ರಾಜ್ಯಪಾಲರಾದ ಭಗತ್‍ಸಿಂಗ್ ಕೋಶಿಯಾರ್ ಅವರು ಸಂತಾಪ ಸೂಚಿಸಿದ್ದಾರೆ.
ದೇಶದಲ್ಲಿ 13 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ತಮಿಳುನಾಡಿನ ಎಂ.ಕರುಣಾನಿಧಿ ಹೋಂದಿದ್ದಾರೆ. ಸೋಲಿಲ್ಲದೆ ಸತತವಾಗಿ ಗೆಲ್ಲುತ್ತಿದ್ದ ಕರುಣಾನಿಧಿ ಅವರು ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.