ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣ: ಬಾಲಿವುಡ್ ಪ್ರಭಾವಿ ನಿರ್ಮಾಪಕರ ಮನೆ ಮೇಲೆ ಎನ್ ಸಿಬಿ ದಾಳಿ, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕೂಡ ಜಾರಿ
ಮುಂಬೈ: ಕ್ರೂಸ್ ಶಿಪ್ ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ ಕೂಡ ಮುಂಬೈನಲ್ಲಿ ದಾಳಿ ಮುಂದುವರೆದಿದ್ದು, ಬಾಲಿವುಡ್ ನ ಪ್ರಭಾವಿ ನಿರ್ಮಾಪಕರೊಬ್ಬರ ಮನೆ ಮೇಲೆ ಎನ್ ಸಿಬಿ ದಾಳಿ ನಡೆಸಿದೆ.
ಮುಂಬೈನ ಪ್ರತಿಷ್ಠಿತ ಬಾಂದ್ರಾ ಪ್ರದೇಶದಲ್ಲಿರುವ ನಿರ್ಮಾಪಕ ಇಮ್ತಿಯಾಜ್ ಖಾತ್ರಿ ಅವರ ನಿವಾಸದ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಅಲ್ಲದೆ ಎನ್ ಸಿಬಿ ಮೂಲಗಳ ಮುಂಬೈ ಮೂಲದ ಬಿಲ್ಡರ್ ಮಗನಾಗಿರುವ ಖಾತ್ರಿ ಕೂಡ ಈ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ. ಖಾತ್ರಿ ಬಾಲಿವುಡ್‌ನ ಅನೇಕ ದೊಡ್ಡ ತಾರೆಯರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದು, ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಾದಕ ದ್ರವ್ಯಗಳನ್ನು ಪೂರೈಸಿದ್ದಾರೆ ಎಂದು ಆರೋಪಿಸಲಾಗಿತ್ತು ಎನ್ನಲಾಗಿದೆ.