ಸುತ್ತಾಟಕ್ಕೆ ಸೀಮಿತವಾದ ಗೃಹ ಸಚಿವರ ಮೈಸೂರು ಭೇಟಿ ಕನಿಷ್ಠ ಸಭೆಯನ್ನೂ ನಡೆಸದ ಸಚಿವರು

ಸುತ್ತಾಟಕ್ಕೆ ಸೀಮಿತವಾದ ಗೃಹ ಸಚಿವರ ಮೈಸೂರು ಭೇಟಿ ಕನಿಷ್ಠ ಸಭೆಯನ್ನೂ ನಡೆಸದ ಸಚಿವರು

ಮೈಸೂರು: ನಗರದಲ್ಲಿ ಗ್ಯಾಂಗ್ ರೇಪ್ ಪ್ರಕರಣ ಗಂಭೀರತೆ ಪಡೆದು, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರೆ, ಇತ್ತ ಗೃಹ ಸಚಿವರು ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಚಾಮುಂಡಿ ಬೆಟ್ಟ, ಕರ್ನಾಟಕ ಪೊಲೀಸ್ ಅಕಾಡೆಮಿ, ನಗರ ಪೊಲೀಸ್ ಆಯುಕ್ತರ ಭವನ ಸುತ್ತಾಡಿಕೊಂಡು, ಶಿಕ್ಷಣಾರ್ಥಿಗಳೊಂದಿಗೆ ಸಂವಾದ, ಫೈರಿಂಗ್ ಮಾಡುತ್ತಾ ಕಾಲ ಹಗರಣದಲ್ಲಿ ತೊಡಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ರಾತ್ರಿ ಮೈಸೂರಿಗೆ ಆಗಮಿಸಿದ ಗೃಹ ಸಚಿವರು, ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿ, ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿ ದರ್ಶನ ಮಾಡಿದ್ದರು. ಈಗ ಕರ್ನಾಟಕ ಪೊಲೀಸ್ ಅಕಾಡೆಮಿ, ಆಯುಕ್ತರ ಭವನ ಸುತ್ತುತ್ತ ಕಾಲ ಹರಣ ಮಾಡಿದ್ದಾರೆಯೇ ಹೊರತು, ಸಾಮೂಹಿಕ ಅತ್ಯಾಚಾರ ನಡೆದ ಘಟನಾ ಸ್ಥಳಕ್ಕಾಗಲಿ, ಸಂತ್ರಸ್ತೆಯ ಬಳಿಗಾಗಲಿ ಹೋಗಿಲ್ಲ. ಜೊತೆಗೆ ಪೊಲೀಸ್ ಅಧಿಕಾರಿಗಳ ಸಭೆ ನಡೆಸದಿರುವುದು ಹಳೆಯ ಗಾದೆ ನೆನಪಿಸಿದಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರುಕರ್ನಾಟಕ ಪೊಲೀಸ್ ಅಕಾಡೆಮಿಯ ವಿಭಾಗಗಳಿಗೆ ತೆರಳಿ ಮಾಹಿತಿ ಪಡೆದುಕೊಂಡರು. ಈ ವೇಳೆ ಪೊಲೀಸ್ ಫೈರಿಂಗ್ ತರಬೇತಿ ಬಗ್ಗೆ ವಿವರಗಳನ್ನು ಅಧಿಕಾರಿಗಳು ನೀಡಿದರು. ಈ ಸಂದರ್ಭದಲ್ಲಿ ಆರಗ ಜ್ಞಾನೇಂದ್ರ ಪಿಸ್ತೂಲ್ ನಿಂದ ನಿಗಧಿತ ಸ್ಥಳದತ್ತ ಗುರಿಯಿಟ್ಟು ಫೈರಿಂಗ್ ಮಾಡಿದರು. ಆನಂತರದ ಪ್ರಯತ್ನಗಳಲ್ಲಿ ನಿಗಧಿತ ಗುರಿಯತ್ತ ಫೈರಿಂಗ್ ಮಾಡುವಲ್ಲಿ ವಿಫಲರಾದರು.