ಬೆಂಗಳೂರಿನಲ್ಲಿ ಕನಿಷ್ಠ ಮುಂದಿನ 2 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರಿನಲ್ಲಿ ಕನಿಷ್ಠ ಮುಂದಿನ 2 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು, ಅಕ್ಟೋಬರ್ 7: ಬೆಂಗಳೂರಿನಲ್ಲಿ ಭಾನುವಾರದಿಂದ ಬಿರುಸು ಪಡೆದಿರುವ ಮಳೆ ಇನ್ನಷ್ಟು ದಿನ ಮುಂದುವರೆಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರಿನಲ್ಲಿ ಭಾನುವಾರ ಸಂಜೆ ಭಾರೀ ಮಳೆಯಾಗಿ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು. ಮಂಗಳವಾರ ಸಂಜೆ ಬಿರುಸು ಪಡೆದು ಬುಧವಾರ ಬೆಳಗಿನ ಜಾವದವರೆಗೂ ನಿರಂತರವಾಗಿ ಮಳೆಯಾಗಿದೆ.

ಇದೀಗ ನಗರದಲ್ಲಿ ಇನ್ನೂ ಕನಿಷ್ಠ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಈ ಅವಧಿಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.

ಅಕ್ಟೋಬರ್ 5ರಿಂದ 6ರವರೆಗೆ ರಾಜಾಜಿನಗರದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಒಂದು ದಿನದಲ್ಲಿ 61 ಎಂಎಂ ಮಳೆ ದಾಖಲಾಗಿದೆ. ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಸಾಧಾರಣ ಪ್ರಮಾಣದ ಮಳೆ ದಾಖಲಾಗಿದೆ.

ಯಲಹಂಕ ವಲಯದ ಬಿಬಿಎಂಪಿ ವ್ಯಾಪ್ತಿಯ ಚೌಡೇಶ್ವರಿ ಲೇಔಟ್‌ನಲ್ಲಿ 49 ಎಂಎಂ ಮಳೆಯಾಗಿದೆ. ದೊಡ್ಡನೆಕ್ಕುಂದಿ, ಮಹದೇವಪುರ ವಲಯದಲ್ಲಿ 46.6 ಎಂಎಂ ಮಳೆಯಾಗಿದೆ. ಅಟ್ಟೂರು, ಯಲಹಂಕದಲ್ಲಿ ಕ್ರಮೇಣ 45.5 ಎಂಎಂ ಹಾಗೂ 42 ಎಂಎಂ ಮಳೆಯಾಗಿದೆ.

ಮಂಗಳವಾರ ರಾತ್ರಿಯಿಡೀ ನಿರಂತರ ಮಳೆ ಸುರಿದ ಪರಿಣಾಮವಾಗಿ ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದವು. ಬುಧವಾರ ಬೆಳಿಗ್ಗೆ ಹಲವೆಡೆ ಟ್ರಾಫಿಕ್ ಜಾಂ ಉಂಟಾಗಿತ್ತು.