ಭಾರತದಲ್ಲಿ ಹೆಚ್ಚಿನ ಮುಸ್ಲಿಂ ನಾಯಕರು ತಾಲಿಬಾನಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ ತಸ್ಲಿಮಾ ನಸ್ರೀನ್‌

ಭಾರತದಲ್ಲಿ ಹೆಚ್ಚಿನ ಮುಸ್ಲಿಂ ನಾಯಕರು ತಾಲಿಬಾನಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ ತಸ್ಲಿಮಾ ನಸ್ರೀನ್‌

ಬೆಂಗಳೂರು: ದೇಶದಲ್ಲಿ ಹೆಚ್ಚಿನ ಮುಸ್ಲಿಂ ನಾಯಕರು ಅಫ್ಗಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್‌ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಬಾಂಗ್ಲಾ ಮೂಲದ ಲೇಖಕಿ ತಸ್ಲಿಮಾ ನಸ್ರೀನ್‌ ಅವರು ಟ್ವೀಟ್‌ ಮೂಲಕ ಆರೋಪ ಮಾಡಿದ್ದಾರೆ.
ತಾಲಿಬಾನ್‌ ಅನ್ನು ಬೆಂಬಲಿಸುವವರು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆಯನ್ನು ಯಾಕೆ ಬಯಸುತ್ತಾರೆ ಎಂಬದು ಅಚ್ಚರಿಯ ಸಂಗತಿಯಾಗಿದೆ. ಅದೇ ನಾಯಕರು ಮುಸ್ಲಿಂ ರಾಷ್ಟ್ರಗಳಲ್ಲಿ ಥಿಯೋಕ್ರೆಟಿಕ್‌ (ಧರ್ಮ ಮತ್ತು ದೇವರ ಹೆಸರಲ್ಲಿ ನಿಯಮಗಳ ಹೇರಿಕೆ ) ಮತ್ತು ಜಾತ್ಯಾತೀತವಲ್ಲದ ಆಡಳಿತವನ್ನು ಬೆಂಬಲಿಸುತ್ತಾರೆ' ಎಂದು ತಸ್ಲಿಮಾ ನಸ್ರೀನ್‌ ಕಿಡಿಕಾರಿದ್ದಾರೆ. 'ಭಾರತದಲ್ಲಿ ದೇವಬಂದಿಗಳು ಉಗ್ರಕೃತ್ಯದಲ್ಲಿ ಭಾಗಿಯಾಗಿಲ್ಲ. ಆದರೆ ಭಾರತದ ಹೊರಗಿನ ಕೆಲವು ಉಗ್ರ ಸಂಘಟನೆಗಳು ದೇವಬಂದಿ ಸಿದ್ಧಾಂತದಿಂದ ಆಕರ್ಷಿತಗೊಂಡಿವೆ' ಎಂದು ತಸ್ಲಿಮಾ ಟ್ವೀಟ್‌ನಲ್ಲಿ ಹೇಳಿದ್ದಾರೆ. ದೇವಬಂದಿ ಎಂಬುದು ಸುನ್ನಿ ಪಂಥದೊಳಗೆ ಆರಂಭಗೊಂಡ ಇಸ್ಲಾಂ ಪುನಶ್ಚೇತನ ಆಂದೋಲನವಾಗಿದೆ. ಇದು 19ನೇ ಶತಮಾನದಲ್ಲಿ ದಾರುಲ್‌ ಉಲೂಮ್‌ ಇಸ್ಲಾಮಿಕ್‌ ಸೆಮಿನರಿ ಆಧಾರದಲ್ಲಿ ಉತ್ತರ ಪ್ರದೇಶದ ಶಹಾರನ್‌ಪುರದ ದೇವಬಂದ ಎಂಬಲ್ಲಿ ಆರಂಭಗೊಂಡ ಆಂದೋಲನವಾಗಿದೆ. 'ಸ್ತ್ರೀದ್ವೇಷಿ ತಾಲಿಬಾನಿಯರನ್ನು ಶ್ಲಾಘಿಸುವ ಮೊದಲು ಆಫ್ಗನ್‌ ಮಹಿಳೆಯರ ಸ್ಥಾನದಲ್ಲಿ ನಿಮ್ಮನ್ನು ಊಹಿಸಿಕೊಳ್ಳಿ' ಎಂದು ತಸ್ಲಿಮಾ ನಸ್ರೀನ್‌ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.