ಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿ

ಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿ

ಬೆಂಗಳೂರು, ಆಗಸ್ಟ್ 30; ಕರ್ನಾಟಕದಲ್ಲಿ ಹೆಚ್ಚು ಲಸಿಕೆ ನೀಡುವ ಜಿಲ್ಲೆಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 89,242 ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿಯನ್ನು ಪಾಲಿಕೆ ನೀಡಿದೆ.

ಬೆಂಗಳೂರು ನಗರದಲ್ಲಿ ದಿನದ 24 ಗಂಟೆಯೂ ಲಸಿಕೆ ನೀಡುವ ಕೇಂದ್ರ ಆರಂಭವಾಗುತ್ತಿದೆ. ಲಸಿಕೆ ನೀಡುವ ಪ್ರಕ್ರಿಯೆ ಚುರುಕುಗೊಳಿಸಲು ಮುಂದಾಗಿರುವ ಬಿಬಿಎಂಪಿ 24 ಗಂಟೆ ಲಸಿಕೆ ನೀಡುವ ಕೇಂದ್ರವನ್ನು ತೆರೆಯಲಿದೆ. ಪ್ರತಿ ವಲಯಕ್ಕೆ ಒಂದು ಇಂತಹ ಕೇಂದ್ರ ತೆರೆಲು ಚಿಂತನೆ ನಡೆಸಲಾಗಿದೆ.

ದೇಶದಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ದೆಹಲಿ ಬಿಟ್ಟರೆ 1 ಕೋಟಿ ಜನರಿಗೆ ಲಸಿಕೆ ನೀಡಿರುವ ನಗರ ಬೆಂಗಳೂರು ಆಗಿದೆ. ಈಗ ಬಿಬಿಎಂಪಿ ಪ್ರತಿದಿನ 90 ಸಾವಿರ ಜನರಿಗೆ ಲಸಿಕೆ ನೀಡುವ ಗುರಿಯನ್ನು ಹಾಕಿಕೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 8 ವಲಯಗಳಿವೆ. ಪ್ರತಿ ವಲಯದಲ್ಲಿ ಒಂದು ಸರ್ಕಾರಿ ಲಸಿಕಾ ಕೇಂದ್ರದಲ್ಲಿ ದಿನದ 24 ಗಂಟೆಯೂ ಲಸಿಕೆ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಸೆಪ್ಟೆಂಬರ್ ಬಳಿಕ ಪೂರೈಕೆಯಾಗುವ ಲಸಿಕೆ ಪ್ರಮಾಣವನ್ನು ನೋಡಿಕೊಂಡು ಇಂತಹ ಕೇಂದ್ರ ಆರಂಭಿಸಲಾಗುತ್ತದೆ.

ಅವಧಿ ವಿಸ್ತರಣೆ; ಬಿಬಿಎಂಪಿ ದಿನದ 24 ಗಂಟೆಯೂ ಲಸಿಕೆ ನೀಡುವುದು ಮಾತ್ರವಲ್ಲ. ಕೊಳಗೇರಿ ಪ್ರದೇಶ, ದಿನಗೂಲಿ ಕಾರ್ಮಿಕರಿಗೆ ಸುಲಭವಾಗಿ ಲಸಿಕೆ ಸಿಗುವಂತೆ ಮಾಡಲು ಲಸಿಕೆ ನೀಡುವ ಸಮಯವನ್ನು ವಿಸ್ತರಣೆ ಮಾಡಲಿದೆ. ಪ್ರತಿದಿನ ರಾತ್ರಿ 8 ಗಂಟೆಯ ತನಕ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜೊತೆ ಸೋಮವಾರ ಬಿಬಿಎಂಪಿ ಅಧಿಕಾರಿಗಳು ಸಭೆ ನಡೆಸಲಿದ್ದು, ಬಳಿಕ 8 ವಲಯಗಳಲ್ಲಿ 24 ಗಂಟೆಯೂ ಲಸಿಕೆ ನೀಡುವ ಲಸಿಕಾ ಕೇಂದ್ರದ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಇದರಿಂದಾಗಿ ಯಾವುದೇ ಸಮಯದಲ್ಲಿ ಜನರು ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆಯನ್ನು ಪಡೆಯಬಹುದಾಗಿದೆ.

ಪ್ರಸ್ತುತ ಬೆಂಗಳೂರು ನಗರದಲ್ಲಿ ಬೆಳಗ್ಗೆ 8 ರಿಂದ 2.30ರ ತನಕ ಲಸಿಕೆ ನೀಡಲಾಗುತ್ತದೆ. ಒಂದು ವೇಳೆ ಲಸಿಕೆ ಸಂಗ್ರಹವಿದ್ದರೆ ಈ ಸಮಯವನ್ನು ಮತ್ತಷ್ಟು ವಿಸ್ತರಣೆ ಮಾಡಲಾಗುತ್ತದೆ. ಆದರೆ ಈಗ ಪ್ರತಿ ವಲಯದ ಒಂದು ಕೇಂದ್ರದಲ್ಲಿ 24 ಗಂಟೆಯೂ ಲಸಿಕೆ ನೀಡಲು ಬಿಬಿಎಂಪಿ ಯೋಜನೆ ರೂಪಿಸುತ್ತಿದೆ.

ಪ್ರಸ್ತುತ ಲಸಿಕೆ ಕೇಂದ್ರದ ಮುಂದೆ ಕ್ಯು ನಿಂತಿರುವ ಜನರನ್ನು ಲಸಿಕೆ ಖಾಲಿಯಾದ ತಕ್ಷಣ ವಾಪಸ್ ಕಳಿಸಲಾಗುತ್ತಿದೆ. ಜನರಿಗೆ ಸಹಾಯಕವಾಗುವಂತೆ ಕ್ಯು ನಿಂತಿರುವ ಜನರಿಗೆ ನಾಳೆಯ ಕೂಪನ್‌ ಅನ್ನು ಇಂದೇ ವಿತರಣೆ ಮಾಡಲು ಸಹ ಬಿಬಿಎಂಪಿ ತೀರ್ಮಾನಿಸಿದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಭಾನುವಾರ ರಾತ್ರಿ ತನಕ ಬಿಬಿಎಂಪಿಗೆ 92,56,522 ಡೋಸ್ ಲಸಿಕೆ ಹಂಚಿಕೆಯಾಗಿದೆ. ನಗರದಲ್ಲಿ 67,76,961 ಜನರು ಮೊದಲ ಡೋಸ್, 24,79,562 ಜನರು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ, "ದಿನದ 24 ಗಂಟೆಯೂ ಲಸಿಕೆ ಸಿಗುವಂತೆ ಮಾಡಲು ನಿರ್ಧರಿಸಿದ್ದೇವೆ. ಅಲ್ಲದೇ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಸಮಯವನ್ನು ವಿಸ್ತರಣೆ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಭಾನುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 361 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 7343.