ಡಿಸೆಂಬರ್ ಅಂತ್ಯದೊಳಗೆ ಬೆಳೆ ಪರಿಹಾರ ಪಾವತಿಸಲು ಅಶೋಕ್ ಸೂಚನೆ

ಡಿಸೆಂಬರ್ ಅಂತ್ಯದೊಳಗೆ ಬೆಳೆ ಪರಿಹಾರ ಪಾವತಿಸಲು ಅಶೋಕ್ ಸೂಚನೆ

ಬೆಳಗಾವಿ,ಡಿ.20- ಬೆಳೆ ಹಾನಿಯಾಗಿರುವ ಫಲಾನುಭವಿಗಳಿಗೆ ಡಿಸೆಂಬರ್ ಅಂತ್ಯದೊಳಗೆ ಪರಿಹಾರ ಪಾವತಿಸಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದೊಡ್ಡಗೌಡರ ಮಹಾಂತೇಶ್ ಬಸವಂತರಾಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮನೆ ಹಾನಿಯಾಗಿರುವ ಫಲಾನುಭವಿಗಳಿಗೆ ನಿಯಮಾನುಸಾರ ಪರಿಶೀಲಿಸಿ ಜ.15ರೊಳಗೆ ಪರಿಹಾರ ನೀಡಲು ಕಾಲಮಿತಿ ನೀಡಲಾಗಿದೆ ಎಂದರು.

ಸರ್ಕಾರದಿಂದ ಎ ಮತ್ತು ಬಿ ವರ್ಗದ ಮನೆ ಹಾನಿಗೆ ಮೊದಲ ಕಂತಿನಲ್ಲಿ 95,100ರೂ., ಬಿ ವರ್ಗದ ಮನೆ ಹಾನಿಗೆ ಒಂದೇ ಕಂತಿನಲ್ಲಿ 50 ಸಾವಿರ ರೂ. ಹಣ ಪಾವತಿಸಲು ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಮೂಲ ಸೌಕರ್ಯಗಳ ತುರ್ತು ದುರಸ್ತಿಗಾಗಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ಧಿ, ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿ ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದರು.

ಕಿತ್ತೂರು ತಾಲ್ಲೂಕಿನಲ್ಲಿ ಬೆಳೆ ಹಾನಿಯಾಗಿಯಾದ 877 ಅರ್ಹ ಫಲಾನುಭವಿಗಳಿಗೆ 26.79 ಲಕ್ಷ ರೂ., ಬೈಲಹೊಂಗಲ ತಾಲ್ಲೂಕಿನಲ್ಲಿ 5147 ಫಲಾನುಭವಿಗಳಿಗೆ 567 ಲಕ್ಷ ರೂ.ಗಳನ್ನು ಈಗಾಗಲೇ ಪಾವತಿಸಲಾಗಿದೆ ಎಂದು ಸದನದಲ್ಲಿ ಮಾಹಿತಿ ನೀಡಿದರು.