ಸಿಬ್ಬಂದಿ ಆರೋಗ್ಯ ಕಾಳಜಿಗೆ ಮುಂದಾದ ಜಿ.ಪಂ

ಸಿಬ್ಬಂದಿ ಆರೋಗ್ಯ ಕಾಳಜಿಗೆ ಮುಂದಾದ ಜಿ.ಪಂ

ಮಂಗಳೂರು: ಹೃದಯಾಘಾತದಿಂದ ಒಂದು ವರ್ಷದಲ್ಲಿ ಜಿಲ್ಲೆಯ ಮೂವರು ನೌಕರರನ್ನು ಕಳೆದುಕೊಂಡಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್ ಇಲಾಖೆಯು, ಸಿಬ್ಬಂದಿ ಆರೋಗ್ಯ ಕಾಳಜಿಗೆ ಮುಂದಾಗಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕಚೇರಿ ನೌಕರರ ಸಮಗ್ರ ಆರೋಗ್ಯ ತಪಾಸಣೆಗೆ ಯೋಜನೆ ರೂಪಿಸಿದೆ.

ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಕೆಎಂಸಿ ಮತ್ತು ಯೆನೆಪೋಯ ವೈದ್ಯಕೀಯ ಕಾಲೇಜುಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸ್ಪಂದಿಸಿರುವ ಇವೆರಡು ಆಸ್ಪತ್ರೆಗಳು ತಮ್ಮ ಸಿಎಸ್‌ಆರ್ ನಿಧಿ ಬಳಸಿ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್ ಇಲಾಖೆಯ ಸಿಬ್ಬಂದಿ ಆರೋಗ್ಯ ತಪಾಸಣೆಯನ್ನು ನಡೆಸಿಕೊಡಲು ಮುಂದೆ ಬಂದಿವೆ.

ಟ್ರೊಪೊನಿನ್ ಪರೀಕ್ಷೆ, ಲಿಪಿಟ್ ಪ್ರೊಫೈಲ್, ಹಿಮೊಗ್ಲೋಬಿನ್, ರಕ್ತದೊತ್ತಡ, ಥೈರಾಯ್ಡ್, ಬಾಯಿ ಪರೀಕ್ಷೆ, ಮಹಿಳೆಯರಿಗೆ ಕ್ಯಾನ್ಸರ್‌ ಕಾಯಿಲೆಗೆ ಸಂಬಂಧಿಸಿ ಮೆಮೊಗ್ರಫಿ, ಪಿಎಪಿ ಪರೀಕ್ಷೆ ಸೇರಿದಂತೆ 10 ವಿವಿಧ ಪರೀಕ್ಷೆಗಳನ್ನು ತಜ್ಞ ವೈದ್ಯರು ನಡೆಸಲಿದ್ದಾರೆ. ಈ ಪರೀಕ್ಷೆಗೆ ತಲಾ ಒಬ್ಬರಿಗೆ ಅಂದಾಜು ₹ 3,000 ವೆಚ್ಚವಾಗಲಿದ್ದು, ಇವೆರಡು ಆಸ್ಪತ್ರೆಗಳು ಉಚಿತವಾಗಿ ನಡೆಸಿಕೊಡಲಿವೆ.

'ನಮ್ಮ ಮೂವರು ಸಿಬ್ಬಂದಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಾರ್ವಜನಿಕ ಕೆಲಸದಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯದ ಕಡೆಗೆ ಗಮನ ಕೊಡುವುದು ಕಡಿಮೆಯಾಗುತ್ತದೆ. ಕಾರ್ಯದಕ್ಷತೆ ಹೆಚ್ಚಿಸುವಲ್ಲಿ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಮಹತ್ವದ್ದಾಗಿದೆ. ನೌಕರರ ಮನದಲ್ಲಿ ಮೂಡಿರುವ ಆತಂಕ, ಅಭದ್ರ ಭಾವ ದೂರಗೊಳಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಇಲಾಖೆ ಸಿಬ್ಬಂದಿಯ ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದು ಡಾ. ಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.

'ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿ ಸೇರಿ ಮೊದಲ ಹಂತದಲ್ಲಿ 300 ಜನರಿಗೆ ನ.11ರಂದು ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಿಲ್ ಸಂಗ್ರಾಹಕರು, ಲೆಕ್ಕ ಸಹಾಯಕರು ಸೇರಿ ಉಳಿದ 300 ಜನರ ಆರೋಗ್ಯ
ತಪಾಸಣೆ ನಡೆಸಲಾಗುವುದು. ತಪಾಸಣೆ ವೇಳೆ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ, ಸೂಚಿಸಿದ ಆಸ್ಪತ್ರೆಗೆ ಅವರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು' ಎಂದು ಅವರು ಪ್ರತಿಕ್ರಿಯಿಸಿದರು.