ಬೂತ್ ಅಧ್ಯಕ್ಷರುಗಳೇ ಭಾರತೀಯ ಜನತಾ ಪಕ್ಷದ ಮಾಲೀಕರು : ಅರುಣ್ ಸಿಂಗ್ ಬಣ್ಣನೆ

ಮೈಸೂರು, ;ಬೂತ್ ಅಧ್ಯಕ್ಷರುಗಳೇ ಭಾರತೀಯ ಜನತಾ ಪಕ್ಷದ ಮಾಲೀಕರು ಎಂದು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಭಾ ಸದಸ್ಯ ಅರುಣ್ ಸಿಂಗ್ ಬಣ್ಣಿಸಿದರು.
ಅವರಿಂದು ಭಾರತೀಯ ಜನತಾ ಪಕ್ಷದ ಚಾಮುಂಡೇಶ್ವರಿ ಕ್ಷೇತ್ರದ ಬೂತ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಷ್ಟ್ರೀಯ ಮಟ್ಟದ, ವಿಭಾಗ ಮಟ್ಟದ, ಮಂಡಲ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ, ಬೂತ್ ಮಟ್ಟದಲ್ಲಿ ಪಕ್ಷ ಕಾರ್ಯನಿರ್ವಹಿಸುತ್ತದೆ. ಬೂತ್ ಅಧ್ಯಕ್ಷರೇ ನಮ್ಮ ಪಕ್ಷದ ಮಾಲೀಕರು. ಸ್ಥಳೀಯವಾಗಿ ಬೂತ್ ಅಧ್ಯಕ್ಷರೇ ಸಂಘಟನಾ ಚತುರರಾಗಿರುತ್ತಾರೆ. ಯಾಕೆಂದರೆ ಜಮೀನಿನಲ್ಲಿ ಮಾಲೀಕನೆ ತಾನೇ ಕೆಲಸ ಮಾಡೋದು ಎಂದರು.
169 ಬೂತ್ ಅಧ್ಯಕ್ಷರ ನಾಮಫಲಕ ಅಳವಡಿಸುವ ಸೌಭಾಗ್ಯ ನನಗೆ ಲಭಿಸಿದೆ. ಭಾರತೀಯ ಜನತಾಪಕ್ಷದ ಕಾರ್ಯಕರ್ತರು ಗೌರವಶಾಲಿಗಳು, ಭಾಗ್ಯಶಾಲಿಗಳೂ ಆಗಿದ್ದಾರೆ. ಯಾಕೆಂದರೆ ಇಂದು ಭಾರತೀಯ ಜನತಾ ಪಕ್ಷವು ಕೇವಲ ಕರ್ನಾಟಕ, ಇಡೀ ದೇಶವಲ್ಲದೆ ಸಂಪೂರ್ಣ ವಿಶ್ವದ ಬಲಿಷ್ಠ, ದೊಡ್ಡ ಪಕ್ಷವಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಶಾಸಕರು, ಸಂಸದರನ್ನು ಒಳಗೊಂಡಿದೆ. 17ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವಿದೆ. ಕೇಂದ್ರದಲ್ಲಿ ಎರಡನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಭಾರತೀಯ ಜನತಾ ಪಕ್ವಾಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳು ಮೋದಿಯವರಿಗೆ ಇದ್ದಾರೆ. ವಿಶ್ವದಲ್ಲಿಯೇ ಜನಪ್ರಿಯ ನಾಯಕ ಭಾರತೀಯ ಜನತಾ ಪಕ್ಷದ ಮೋದಿಯವರಾಗಿದ್ದಾರೆ. ಇದರಿಂದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಗೌರವಶಾಲಿಗಳು, ಭಾಗ್ಯಶಾಲಿಗಳಾಗಿದ್ದಾರೆ ಎಂದು ತಿಳಿಸಿದರು.
ಪಕ್ಷದ ಕಾರ್ಯವನ್ನು ನಿರಂತರವಾಗಿ ಮುಂದುವರಿಸುತ್ತಲೇ ಇರಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ ಅವರು ಬೂತ್ ನ್ನು ಯಾವ ರೀತಿ ಸಕ್ರಿಯವಾಗಿರಿಸಬೇಕು ಎಂಬುದನ್ನೂ ತಿಳಿಸಿದರು. ನರೇಂದ್ರ ಮೋದಿಯವರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಿ. ಇದರಿಂದ ಜನರಿಗೆ ಉಪಯೋಗವಾಗಲಿ, ಬಡವರಿಗೆ ಅನುಕೂಲವಾಗುವ ಯೋಜನೆಗಳಿವೆ ಅವುಗಳನ್ನು ತಲುಪಿಸಿ ಎಂದು ಹೇಳಿದರು. ಮೈಸೂರಿನಲ್ಲಿ ಯಾವ ರೀತಿ ಕೆಲಸಗಳು ನಡೆಯುತ್ತಿವೆ ಎಂಬುದು ತಿಳಿದಿದೆ. ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಿ ಮೋದಿಯವರ ಬಳಿ ತೆರಳಿ ಸದಾ ಚರ್ಚಿಸಿ ತಮ್ಮ ಕ್ಷೇತ್ರಕ್ಕೆ ಒಂದಿಲ್ಲೊಂದು ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಲೇ ಇರುತ್ತಾರೆ ಎಂದು ಸಂಸದರ ಕಾರ್ಯವನ್ನು ಶ್ಲಾಘಿಸಿದರು.