ಹುಟ್ಟುಹಬ್ಬದಂದೇ ಸಾವಿನ ಹಾದಿ ಹಿಡಿದ ಯುವತಿ! ಇದ್ದ ಒಬ್ಬ ಮಗಳೂ ದುರಂತ ಸಾವು, ಪಾಲಕರ ಆಕ್ರಂದನ

ಹುಟ್ಟುಹಬ್ಬದಂದೇ ಸಾವಿನ ಹಾದಿ ಹಿಡಿದ ಯುವತಿ! ಇದ್ದ ಒಬ್ಬ ಮಗಳೂ ದುರಂತ ಸಾವು, ಪಾಲಕರ ಆಕ್ರಂದನ

ಹೈದರಾಬಾದ್​: ಹುಟ್ಟುಹಬ್ಬದ ದಿನ ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಸೇರಿ ಸಂಭ್ರಮಾಚರಣೆ ಮಾಡಬೇಕಿದ್ದ ಯುವತಿಯೊಬ್ಬಳು ಅದೇ ದಿನ ಸಾವಿನ ಹಾದಿ ಹಿಡಿದಿರುವ ಮನಕಲಕುವ ಘಟನೆ ಹೈದರಾಬಾದ್​ನ ಕುಕ್ಕಟಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಳನ್ನು ಹರ್ಷಿತಾ (20) ಅಲಿಯಾಸ್​ ಹನಿ ಎಂದು ಗುರುತಿಸಲಾಗಿದೆ. ಈಕೆ ಆಂಧ್ರ ಪ್ರದೇಶದ ಗುಂಟೂರು ಮೂಲದವಳು. ಸಾಯಿಕಿರಣ್​ ಮತ್ತು ನರ್ಮದಾ ದಂಪತಿ ಒಬ್ಬಳೇ ಪುತ್ರಿಯಾಗಿದ್ದ ಹರ್ಷಿತಾ, ಸಿಎ ಅಧ್ಯಯನ ಮಾಡುತ್ತಿದ್ದಳು. ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಬುಧವಾರ ಸಂಜೆ ಸಾಯಿಕಿರಣ್​ ಮತ್ತು ನರ್ಮದಾ ನೆಲ್ಲೂರಿಗೆ ತೆರಳಿದ್ದರು. ಶುಕ್ರವಾರ ಬೆಳಗ್ಗೆ ಮರಳಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ದಂಪತಿ ಮನೆಗೆ ಬಂದಾಗ ಬಾಗಿಲು ಮುಚ್ಚಿರುವುದನ್ನು ಗಮನಿಸಿದ್ದಾರೆ. ಎಷ್ಟೇ ಬಡಿದರು ಮಗಳು ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಾಯಿಕುಮಾರ್​ ಮನೆಯ ಮಾಲೀಕನ ಸಹಾಯದಿಂದ ಬಾಗಿಲು ತೆಗೆದು, ಬೆಡ್​ರೂಮ್​ಗೆ ತೆರಳಿದಾಗ ಮಗಳು ಹರ್ಷಿತಾ ನೇಣು ಬಿಗಿದುಕೊಂಡಿರುವುದನ್ನು ನೋಡಿ ಆಘಾತಕ್ಕೆ ಒಳಗಾದರು.

ಹುಟ್ಟು ಹಬ್ಬದ ದಿನವೇ ಮಗಳು ಮೃತಪಟ್ಟಿದ್ದಾಳೆ. ಹುಟ್ಟುಹಬ್ಬದ ದಿನ ತನ್ನ ಫ್ರೆಂಡ್ಸ್​ ಜೊತೆ ಸಿನಿಮಾಗೆ ಹೋಗಿ ಬಂದಿದ್ದಳು. ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಕುಕ್ಕಟಪಲ್ಲಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓದಿನ ಒತ್ತಡದಿಂದ ಈ ರೀತಿ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)