'ಕಾಂತಾರ 2' ಶೂಟಿಂಗ್ ಶುರು, ಬಿಡುಗಡೆ ಯಾವಾಗ? ಇದು ಮುಂದುವರಿದ ಭಾಗವಲ್ಲ!

Kantara 2 : ಕಳೆದ ವರ್ಷ ಬಿಡುಗಡೆಯಾದ, ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬ್ಲಾಕ್‌ಬಸ್ಟರ್ ಸಿನಿಮಾ 'ಕಾಂತಾರ' ಸೂಪರ್ ಡೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಈ ಸಿನಿಮಾ ಸಿನಿಪ್ರೇಮಿಗಳಿಗೆ ಮನಸ್ಸು ಗೆದ್ದ ಸಿನಿಮಾ ಇದು.
ರಿಷಬ್ ಶೆಟ್ಟಿ ಪ್ರತಿ ಬಾರಿಯೂ ಭಿನ್ನ ವಿಭಿನ್ನ ಕಥೆ ಮಾಡುತ್ತಾರೆ. ಕಾಂತಾರ 2 ಚಿತ್ರದಲ್ಲಿ ಯಾವ ರೀತಿಯ ಚಿತ್ರಕಥೆ ಇರಬಹುದು ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಸಂದರ್ಶನವೊಂದರಲ್ಲಿ ನಟ ದಿಗಂತ್, ರಿಷಬ್ ಸದ್ಯ ಕಾಂತಾರ 2 ಕಥೆ ಬರೆಯುವಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದರು. ಇದು ಕಾಂತಾರ 2 ಊಹಾಪೋಹಗಳಿಗೆ ಪುಷ್ಠಿ ನೀಡಿತ್ತು
ಕಾಂತಾರ 2 ಸಿನಿಮಾ ಮಾಡುವ ಬಗ್ಗೆ ಚಿತ್ರತಂಡ ದೈವದ ಅನುಮತಿಯನ್ನೂ ಕೇಳಿತ್ತು. ಅದಾದ ಬಳಿಕ ಕಾಂತಾರ 2 ಬರುವುದು ಪಕ್ಕಾ ಎಂದೇ ಎಲ್ಲರು ಭಾವಿಸಿದರು. ಇದರ ಬೆನ್ನಲ್ಲೇ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ 2 ಚಿತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಚಿತ್ರದ ಚಿತ್ರೀಕರಣ ಯಾವಾಗ ಆರಂಭಗೊಳ್ಳಲಿದೆ ಹಾಗೂ ರಿಲೀಸ್ ಯಾವಾಗ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
"ರಿಷಬ್ ಶೆಟ್ಟಿ ಸದ್ಯ ಚಿತ್ರದ ಕತೆ ಬರೆಯುತ್ತಿದ್ದಾರೆ. ತನ್ನ ಸಹ ಬರಹಗಾರರ ಜತೆ ಕರ್ನಾಟಕ ಕರಾವಳಿ ಕಾಡಿನ ಒಳಗೆ ಹೋಗಿ ಸಂಶೋಧನೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೆಲ ಭಾಗವನ್ನು ಚಿತ್ರೀಕರಿಸಬೇಕಾಗಿದೆ. ಆದ ಕಾರಣ ಜೂನ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಇದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ" ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ. ಕಾಂತಾರ 2 ಚಿತ್ರ ಕಾಂತಾರದ ಮುಂದುವರಿದ ಭಾಗ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಇದು ಚಿತ್ರದ ಮುಂದುವರಿದ ಭಾಗವಲ್ಲ ಎಂದು ತಿಳಿದುಬಂದಿದೆ. ಕಾಂತಾರದಲ್ಲಿ ತೋರಿಸಲಾಗಿದ್ದ ಕಥೆಗೂ ಮುನ್ನ ನಡೆದಿದ್ದೇನು ಎಂಬುದನ್ನು ಕಾಂತಾರ 2 ಹೇಳಲಿದೆಯಂತೆ. ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿದೆ ಎಂಬುದು ವಿಶೇಷ