ಮತ್ತೆ ದಲಿತ ಸಿ.ಎಂ. ವಿಷಯ ಪ್ರಸ್ತಾಪಿಸಿದ ಸಂಸದ ಜಿಗಜಿಣಗಿ
ವಿಜಯಪುರ: ರಾಜ್ಯದಲ್ಲಿ ದಲಿತ ಸಿಎಂ ಆಗಬೇಕೆಂದು ನನ್ನ ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ. ರಾಜ್ಯದ ರಾಜಕಾರಣದಲ್ಲಿರುವ ದಲಿತರೇನು ಬುದ್ದಿಹೀನರೂ ಅಲ್ಲ, ಅಯೋಗ್ಯರೂ ಅಲ್ಲ. ಎಲ್ಲ ಸಮುದಾಯದವರೂ ಮುಖ್ಯಮಂತ್ರಿ ಆಗಿದ್ದು, ದಲಿತರೇಕೆ ಆಗಬಾರದು.
ಮಂಗಳವಾರ ಇಂಡಿ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶೇ.1 ರಷ್ಟು ಜನಸಂಖ್ಯೆ ಇರುವವರು ಮುಖ್ಯಮಂತ್ರಿಯಾಗಿದ್ದು, ದೇಶದ ಸ್ವಾತಂತ್ರ್ಯ ನಂತರ ಬಹುತೆಕ ಎಲ್ಲ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಶೇ.24 ರಷ್ಟು ಜನಸಂಖ್ಯೆ ಹೊಂದಿರುವ ದಲಿತರೇಕೆ ಮುಖ್ಯಮಂತ್ರಿ ಆಗಬಾರದು. ಈ ವಿಷಯವನ್ನೇ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ ಎಂದರು.
ಮುಂಬರುವ 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ನಾಗಠಾಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕ್ಷೇತ್ರದ ಜನರು ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಬಳ್ಳೊಳ್ಳಿ ವಿಧಾನಸಭೆ ಎನಿಸಿಕೊಂಡಿದ್ದ ಇದೇ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದ ನಾನು, ಈ ಭಾಗದ ಶಾಸಕನಾಗಿ, ವಿವಿಧ ಖಾತೆಗಳ ಸಚಿವನಾಗಿ ಜನಪರ ಸೇವೆಗಳನ್ನ ಮಾಡಿದ್ದೇನೆ. ಹೀಗಾಗಿ ನಾನು ವಿಧಾನಸಭೆಗೆ ಸ್ಪರ್ಧಿಸಬೇಕು ಎಂಬುದು ಬಹುತೇಕರ ಆಗ್ರಹವಾಗಿದೆ ಎಂದರು.
ನಾನು ವಿಧಾನಸಭೆಗೆ ಸ್ಪರ್ಧಿಸಬೇಕು ಎಂಬುದು ಕ್ಷೇತ್ರದ ಜನರ, ಪಕ್ಷದ ಕಾರ್ಯಕರ್ತರ ಆಗ್ರಹವಿದ್ದರೂ ರಾಷ್ಟ್ರೀಯ ಪಕ್ಷವಾದ ಬಿಜೆಪಿ ವರಿಷ್ಠರ ನಿರ್ಣಯವೇ ಅಂತಿಮ. ನಾನು ಲೋಕಸಭೆಗೆ ಸ್ಪರ್ಧಿಸುವ, ವಿಧಾನಸಭೆಗೆ ಕಣಕ್ಕಿಳಿಯುವ ವಿಷಯದಲ್ಲಿ ಪಕ್ಷದ ತೀರ್ಮಾನವೇ ಅಂತಿಮ. ಒಂದೊಮ್ಮೆ ಎರಡೂ ಚುನಾವಣೆಗೆ ಸ್ಪರ್ಧೆ ಬೇಡ ಎಂದರೂ ನಿರುಮ್ಮಳವಾಗಿ ಮನೆಯಲ್ಲಿ ಆರಾಮವಾಗಿರುತ್ತೇನೆ ಎಂದರು.