ರೈಲ್ವೇ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ; ಭೋಜ್ಪುರಿ ಗಾಯಕನ ಅರೆಸ್ಟ್
ಮುಂಬಯಿಯ ಬೋರಿವಲಿ ರೈಲ್ವೇ ನಿಲ್ದಾಣದಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆಪಾದನೆ ಮೇಲೆ ಭೋಜ್ಪುರಿ ಗಾಯಕ ದೀಪಕ್ ಪೂಜಾರಿಯನ್ನು ಸರ್ಕಾರಿ ರೈಲ್ವೇ ಪೊಲೀಸರು ಪಾಲ್ಘರ್ ಜಿಲ್ಲೆಯ ವಿರಾರ್ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಮಾರ್ಚ್ 26ರಂದು ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿನಿಗೆ ಆಕೆಯ ವಿಳಾಸ ಕೇಳಿದ ಪೂಜಾರಿ, ಅಸಂಬದ್ಧ ಮಾತುಗಳನ್ನಾಡಿ ಆಕೆಗೆ ಕಿರುಕುಳ ನೀಡಿದ್ದಾನೆ. ಸಂತ್ರಸ್ತೆ ಕೂಗಿಕೊಂಡ ಕೂಡಲೇ ಸ್ಥಳೀಯ ರೈಲೊಂದನ್ನು ಏರಿದ ಆಪಾದಿತ ಅಲ್ಲಿಂದ ಪರಾರಿಯಾಗಿದ್ದಾನೆ.
ಬೋರಿವಲಿ ನಿಲ್ದಾಣದಲ್ಲಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದು, ಪೊಲೀಸರು ಸಿಸಿ ಟಿವಿ ತುಣುಕುಗಳನ್ನು ಆಧರಿಸಿ ಆಪಾದಿತನ ಪತ್ತೆಗೆ ಬಲೆ ಬೀಸಿದ್ದಾರೆ. ವಿರಾರ್‌ನಲ್ಲಿ ಸಿಕ್ಕಿಬಿದ್ದ ಆಪಾದಿತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಭಾರತೀಯ ದಂಡ ಸಂಹಿತೆಯ 354ನೇ ವಿಧಿಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈತನಿಗೆ ಯಾವುದಾದರೂ ಕ್ರಿಮಿನಲ್ ಹಿನ್ನೆಲೆ ಇದೆಯೇ ಎಂದು ಬೋರಿವಲಿ ಜಿಆರ್‌ಪಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.