3 ರಾಜ್ಯಗಳ ಚುನಾವಣೆಗೆ ಜ.19ರ ಒಳಗೆ ದಿನಾಂಕ ಪ್ರಕಟಿಸಲಿದೆ ಚುನಾವಣಾ ಆಯೋಗ

ನವದೆಹಲಿ: ಈಶಾನ್ಯ ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಜನವರಿ 19 ರೊಳಗೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
'ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವು ಕಳೆದ ವಾರ (ಜನವರಿ 11 ರಿಂದ 14) ಈಶಾನ್ಯದ ಮೂರು ರಾಜ್ಯಗಳಿಗೆ ಭೇಟಿ ನೀಡಿತ್ತು.
'ವಿಶೇಷವಾಗಿ ಮೂರು ರಾಜ್ಯಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಆಯಾ ರಾಜ್ಯಗಳ ರಾಜಧಾನಿಗಳಲ್ಲಿ ಭೇಟಿಯಾಗಿ ಸಮಾಲೋಚನೆ ಮಾಡಲಾಗಿದೆ' ಎಂದು ಅವರು ಹೇಳಿದರು.
'ಚುನಾವಣಾ ಆಯೋಗವು ದೆಹಲಿಯಲ್ಲಿ ಶೀಘ್ರವೇ ಸಭೆ ಸೇರಲಿದೆ. ನಂತರ ಗುರುವಾರದ ವೇಳೆಗೆ ಮೂರು ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ" ಎಂದು ಅಧಿಕಾರಿಯ ಮಾಹಿತಿ ಉಲ್ಲೇಖಿಸಿ ಐಎಎನ್‌ಎಸ್ ವರದಿ ಮಾಡಿದೆ.
ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆಗಳ ಐದು ವರ್ಷಗಳ ಅವಧಿಯು ಕ್ರಮವಾಗಿ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22 ರಂದು ಕೊನೆಗೊಳ್ಳಲಿದೆ ಮತ್ತು ಆ ಅವಧಿಗೆ ಮೊದಲು, ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕಿದೆ.