ಬಿಜೆಪಿ ಸರ್ಕಾರಕ್ಕೆ ಇಂಥಾ ದೈನೇಸಿ ಸ್ಥಿತಿ ಬರಬಾರದಿತ್ತು: ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಅ.21: ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ ಖರೀದಿಸಲು ದಾನಿಗಳ ನೆರವು ಪಡೆಯಲು ಸೂಚಿಸಿದ್ದ ಸರಕಾರವು ಇದೀಗ ಮೂಲಭೂತ ಸೌಕರ್ಯ ಒದಗಿಸಲು ವಿದ್ಯಾರ್ಥಿಗಳ ಪೋಷಕರಿಂದಲೇ ಮಾಸಿಕ 100 ರೂ.ಗಳನ್ನು ದೇಣಿಗೆ ಸಂಗ್ರಹಿಸಲು ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸರಕಾರದ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ''ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ಬಿಜೆಪಿ ಸರ್ಕಾರದ ಭ್ರಷ್ಟ ಕಣ್ಣು ಬಿದ್ದಿದೆ. ಕಮಿಷನ್ ಹೆಸರಲ್ಲಿ ರಾಜ್ಯದ ಖಜಾನೆ ಲೂಟಿ ಆಯಿತು, ಈಗ ಬಡ ಮಕ್ಕಳ ಪೋಷಕರ ಜೇಬಿಗೂ ಕತ್ತರಿ ಹಾಕಿರುವ ಬಿಜೆಪಿ ಸರ್ಕಾರಕ್ಕೆ ಇಂಥಾ ದೈನೇಸಿ ಸ್ಥಿತಿ ಬರಬಾರದಿತ್ತು'' ಎಂದು ಕಿಡಿಕಾರಿದ್ದಾರೆ.
''ವಿದ್ಯಾರ್ಥಿಗಳಿಗೆ ಹಾಲು, ಬಿಸಿ ಊಟ, ಸಮವಸ್ತ್ರ-ಶೂ, ವಿದ್ಯಾಸಿರಿ, ಹಾಸ್ಟೆಲ್ ಸೌಲಭ್ಯಗಳನ್ನು ನೀಡಿದ್ದು ನಾವು. ಅವರಿಂದ ಒಂದೊಂದನ್ನೇ ಕಿತ್ತುಕೊಳ್ಳುತ್ತಿರುವ ಬಜೆಪಿ ಸರ್ಕಾರ ಈಗ ಅವರಿಂದ ದುಡ್ಡುಕಿತ್ತುಕೊಳ್ಳಲು ಹೊರಟಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ವೇದಿಕೆ ಮೇಲೆ ನಿಂತು ಧಮ್, ತಾಕತ್ ಎಂದು ಬೊಬ್ಬಿರಿಯುವವರು ವಿದ್ಯಾರ್ಥಿಗಳ ನೆರವಿನ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ ತಮ್ಮ ತಾಕತ್ ತೋರಿಸಲಿ. ನಮ್ಮ ಸರ್ಕಾರ ವಿದ್ಯಾಸಿರಿ, ಅರಿವು, ಶೂ ಭಾಗ್ಯ ವಿದೇಶಿ ವ್ಯಾಸಂಗಕ್ಕೆ ಆರ್ಥಿಕ ನೆರವು, ಶೈಕ್ಷಣಿಕ ಸಾಲ ಯೋಜನೆ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡಿದರೆ, ಈಗಿನ ಬಿಜೆಪಿ ಸರ್ಕಾರ ಓದುವ ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡಿ ಅವರ ಬದುಕನ್ನು ಕತ್ತಲಿಗೆ ದೂಡುತ್ತಿದೆ'' ಎಂದು ವಾಗ್ದಾಳಿ ನಡೆಸಿದ್ದಾರೆ.
''ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಪೋಷಕರಿಂದ ಹಣ ಸಂಗ್ರಹಿಸುವಂತೆ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಮತ್ತು ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವ ಎಲ್ಲಾ ಶೈಕ್ಷಣಿಕ ಯೋಜನೆಗಳಿಗೆ ಪುನರ್ ಚಾಲನೆ ನೀಡಬೇಕು ಎಂದು ರಾಜ್ಯ ಬಿಜೆಪಿ
ಸರ್ಕಾರವನ್ನು ಒತ್ತಾಯಿಸುತ್ತೇನೆ'' ಎಂದು ಹೇಳಿದ್ದಾರೆ.