ತಮಿಳು ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಕಡೆಯಿಂದ ಗುಡ್ ನ್ಯೂಸ್?
ನಟಿ ರಶ್ಮಿಕಾ ಮಂದಣ್ಣ ಖ್ಯಾತಿ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ದೊಡ್ಡ ಬಜೆಟ್ ಚಿತ್ರಗಳು ಅವರ ಕೈಯಲ್ಲಿವೆ. ಈಗ ಅವರು ತಮಿಳು ಚಿತ್ರರಂಗದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡೋಕೆ ಮುಂದಾಗಿದ್ದಾರೆ. ಅರ್ಥಾತ್ ತಮಿಳಿನ ಚಿತ್ರವೊಂದಕ್ಕೆ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
'ಜಾತಿ ರತ್ನಾಲು' ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡ ನಿರ್ದೇಶಕ ಅನುದೀಪ್ ಕೆ.ವಿ. ಈಗ ಹೊಸ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಿವ ಕಾರ್ತಿಕೇಯನ್ ಜತೆ ಅವರು ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಏಷ್ಯನ್ ಗ್ರೂಪ್ ಮುಖ್ಯಸ್ಥ ನಾರಾಯಣ್ ದಾಸ್ ನಾರಂಗ್ ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುವ ಆಲೋಚನೆಯಲ್ಲಿ ಚಿತ್ರತಂಡ ಇದೆ.
ಕಾರ್ತಿ ನಟನೆಯ 'ಸುಲ್ತಾನ್' ಚಿತ್ರದ ಮೂಲಕ ರಶ್ಮಿಕಾ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದಾದ ನಂತರದಲ್ಲಿ ಅವರು ಯಾವುದೇ ತಮಿಳು ಸಿನಿಮಾ ಒಪ್ಪಿಕೊಂಡಿಲ್ಲ. ಒಂದೊಮ್ಮೆ ಈ ಚಿತ್ರ ಒಪ್ಪಿಕೊಂಡರೆ ಅವರು ಮತ್ತೊಮ್ಮೆ ಕಾಲಿವುಡ್ಗೆ ಕಾಲಿಟ್ಟಂತಾಗುತ್ತದೆ.
ಅಂದಹಾಗೆ, ಈ ಸಿನಿಮಾ ತೆಲುಗು ಹಾಗೂ ತಮಿಳು ಎರಡಲ್ಲೂ ಸಿದ್ಧಗೊಳ್ಳುತ್ತಿದೆ. ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾದರೆ, ಸಿನಿಮಾಗೆ ದೊಡ್ಡಮಟ್ಟದಲ್ಲಿ ಮೈಲೇಜ್ ಸಿಕ್ಕಂತಾಗುತ್ತದೆ. ಸಿನಿಮಾಗೆ ಅವರು ಸಹಿ ಹಾಕಿದ ನಂತರದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗುವ ನಿರೀಕ್ಷೆ ಇದೆ.
ವಿಕಾಸ್ ಬಹ್ಲ್ ಆಯಕ್ಷನ್-ಕಟ್ ಹೇಳುತ್ತಿರುವ 'ಗುಡ್ಬೈ' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಹಿರಿಯ ನಟಿ ನೀನಾ ಗುಪ್ತಾ, ಥಪ್ಪಡ್ ಖ್ಯಾತಿಯ ಬಾಲಿವುಡ್ ನಟ ಪವೈಲ್ ಗುಲಾಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಗುಡ್ಬೈ' ಮಾತ್ರವಲ್ಲದೇ ಇನ್ನೂ ಅನೇಕ ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ. ಬಾಲಿವುಡ್ನಲ್ಲಿ ಅವರು ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ 'ಮಿಷನ್ ಮಜ್ನು' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಟಾಲಿವುಡ್ನಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟಿಸಿರುವ 'ಪುಷ್ಪ' ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಆ ಚಿತ್ರದಿಂದ ರಶ್ಮಿಕಾ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲು ಸಿಗುವ ನಿರೀಕ್ಷೆ ಇದೆ. ಕೆಜಿಎಫ್, ಬಾಹುಬಲಿ ರೀತಿಯೇ 'ಪುಷ್ಪ' ಕೂಡ ಎರಡು ಪಾರ್ಟ್ನಲ್ಲಿ ಮೂಡಿಬರಲಿದೆ ಎನ್ನಲಾಗುತ್ತಿದೆ.