ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸುವವರ ನಡುವೆ ಯಾರಾಗಲಿದ್ದಾರೆ ಬಿಜೆಪಿ ಅಭ್ಯರ್ಥಿ?

ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸುವವರ ನಡುವೆ ಯಾರಾಗಲಿದ್ದಾರೆ ಬಿಜೆಪಿ ಅಭ್ಯರ್ಥಿ?

ಹುಬ್ಬಳ್ಳಿ : ಕೂಸು ಹುಟ್ಟುವ ಮುಂಚೆ ಕುಲಾವಿ...!
ಸಂತೆಗೆ ಮುಂಚೆ ಗಂಟುಕಳ್ಳರು ನೆರೆದರಂತೆ..! ಈ ಎರಡೂ ಮಾತುಗಳು ಸದ್ಯಕ್ಕೆ ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರ ವಿಧಾನ ಪರಿಷತ್ ಚುನಾವಣೆಗೆ ಅನ್ವಯಿಸುವಂತಿದೆ. ಹೌದು, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇನ್ನೂ ಕರ್ನಾಟಕ ವಿಧಾನ ಪರಿಷತ್ ಚುನಾವಣೆ ದಿನಾಂಕ ಘೋಷಣೆ ಆಗಿಲ್ಲ. ಈ ಮಧ್ಯ ನಾನೇ ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಎಂದು ಹೇಳಿಕೊಂಡು ಓಡಾಡುತ್ತಿದ್ದು, ಇದು ಇಬ್ಬರ ನಡುವೆ ಟಿಕೆಟ್ ಗಾಗಿ ತೀವ್ರ ಹಣಾಹಣಿಗೆ ನಡೆದಿದೆ ಎಂಬುದನ್ನು ಸಾರಿ ಹೇಳುವಂತಿದೆ.

ಮೊನ್ನೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದಿದ್ದರು.ಅಲ್ಲದೇ ಬಿಜೆಪಿಯ ಗಟಾನುಗಟಿ ನಾಯಕರು ತಮ್ಮನ್ನು ಪಕ್ಷಕ್ಕೆ ಆಹ್ವಾನಿಸಿದ್ದು, ಆದಷ್ಟು ಬೇಗ ಬಿಜೆಪಿ ಸೇರ್ಪಡೆ ಯಾಗಲಿದ್ದೆನೆ ಎಂಬುದರ ಕುರಿತಾಗಿಯೂ ಮಾತನಾಡಿದ್ದರು. ಈ ವಿಚಾರ ಈಗಾಗಲೇ ಬಿಜೆಪಿಯಿಂದ ಅಭ್ಯರ್ಥಿ ಎಂದು ಹೇಳಲಾಗುತ್ತಿದ್ದ ಮೋಹನ ಲಿಂಬಿಕಾಯಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರಿಂದ ಈ ಬಗ್ಗೆ ಇಂದು  ಪತ್ರಿಕಾಗೋಷ್ಠಿ ನಡೆಸಿದರು .

ಈ ವೇಳೆ ನಾನೇ ಅಧಿಕೃತ ಅಭ್ಯರ್ಥಿಯಾಗಲಿದ್ದೇನೆ. ಚುನಾವಣೆಯಲ್ಲಿ ಅತಿಹೆಚ್ಚು ಮತಗಳನ್ನು ಪಡೆದು ಆರಿಸಿ ಬರಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು  ಪತ್ರಿಕಾಗೋಷ್ಠಿಯ ಸಂಪೂರ್ಣ ವಿವರ ಹೀಗಿದೆ  ನೋಡಿ

ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಎಲ್ಲ ಕಾರ್ಯಕರ್ತರ ಅಭಿಪ್ರಾಯ ಪಡೆದು, ಮುಂಬರುವ ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಮೂರು ಜನರ ಹೆಸರನ್ನು ಅಧಿಕೃತಗೊಳಿಸಲಾಗಿದೆ. ಅದರಲ್ಲಿ ನಾನು (ಮೋಹನ್ ಲಿಂಪಿಕಾಯಿ), ಸುದೀರ್ ದೇಶಪಾಂಡೆ, ಸಂದೀಪ್ ಬೂದಿಹಾಳ ಅವರ ಹೆಸರುಗಳಿದ್ದವು. ಅದರಲ್ಲಿ ನಮ್ಮ ಪ್ರಮುಖರು ಚರ್ಚಿಸಿ ಅಂತಿಮವಾಗಿ ನನ್ನ ಹೆಸರನ್ನು ಕೇಂದ್ರಕ್ಕೆ ಕಳಿಸಿದ್ದು, ಅಲ್ಲಿಂದ ಆದಷ್ಟು ಬೇಗ ಅಧಿಕೃತಗೊಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಹಾಗಾಗಿ ನಾನು ಹೊಸ ಮತದಾರರ ಸೇರ್ಪಡೆ ಹಾಗೂ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದೇನೆ.  

ಇದಲ್ಲದೇ ನಮ್ಮ ನಾಯಕರಾದ ಜಗದೀಶ್ ಶೆಟ್ಟರ್, ನನ್ನನ್ನು ಕರೆದು ನೀವು ನಿಂತರೆ ಮಾತ್ರ ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯ. ನೀವೇ ಚುನಾವಣೆಗೆ ನಿಲ್ಲಿ ಎಂದು ಹೇಳಿದ ಕಾರಣ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ನಾನು ಚುನಾವಣೆ ಪ್ರಚಾರದ ಪ್ರಕ್ರಿಯೆಯಲ್ಲಿ ನನ್ನ ಎಲ್ಲ ಶಿಕ್ಷಕರು, ನಮ್ಮ ಪ್ರಕೋಷ್ಠದ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ತೊಡಗಿಕೊಂಡಿದ್ದೇವೆ.  ಪ್ರಚಾರ ಮಾಡುತ್ತಿದ್ದೇವೆ. ನಾನೇ ಅಭ್ಯರ್ಥಿಯಾಗಲಿದ್ದೇನೆ. ಮತ್ತು ಚುನಾವಣೆಯಲ್ಲಿ  ಅತಿಹೆಚ್ಚು ಮತಗಳನ್ನು ಪಡೆದುಕೊಂಡು ಆರಿಸಿಬರಲಿದ್ದೇನೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆ ಕುರಿತು ಅಸಮಾಧಾನ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹೊರಟ್ಟಿ ಅವರನ್ನು ಬಿಜೆಪಿಗೆ ಸೇರ್ಪಡೆಯಾಗಿ ಅಂತಾ ಯಾರೂ ಕೇಳೇಯಿಲ್ಲ. ಹಾಗಾಗಿ ಅಸಮಾಧಾನದ ಪ್ರಶ್ನೆ ಬರುವುದಿಲ್ಲ. ಅವರು ತಮ್ಮಷ್ಟಕ್ಕೆ ತಾವೇ ಪ್ರಕಟ ಮಾಡಿಕೊಂಡಿದ್ದಾರೆ. ತಾವೇ ಘೋಷಣೆ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಒಬ್ಬರು ಸಹ ಅವರಿಗೆ ಪಕ್ಷಕ್ಕೆ ಸ್ವಾಗತಿಸಿಲ್ಲ.‌ ಆ ತರಹದ ಘಟನೆಗಳು ನಡೆದಿಲ್ಲ. ಅವರು ಜೆಡಿಎಸ್ ಪಕ್ಷದಿಂದ ಚುನಾವಣೆಗೆ ನಿಂತರೆ ಸೋಲುವ ಅಭದ್ರತೆ ಕಾಡುತ್ತಿದೆ. ಇದಕ್ಕೆ  ಕುಮಾರಸ್ವಾಮಿ ಅವರ ಹೇಳಿಕೆಯೇ ಸಾಕ್ಷಿಯಾಗಿದೆ. ಇದನ್ನು ನೋಡಿದರೆ ಜೆಡಿಎಸ್ ನಿಂದ ಸ್ಪರ್ಧಿಸಿದರೇ ಸೋಲುವುದು ಖಾತರಿಯಾಗಿದೆ. ಈ ಕಾರಣದಿಂದ ಅವರು ಟಾವೆಲ್ಲನ್ನು ಬೇರೆ ಕಡೆಗೆ ಹಾಕುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಟಾವೆಲ್ ಹಾಕಲು ಸ್ಥಳವಿಲ್ಲ‌. ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷ, 76 ವರ್ಷ ಆದವರಿಗೆ ಚುನಾವಣೆಗೆ ನಿಲ್ಲಲು ಅವಕಾಶವಿಲ್ಲ. ನಮ್ಮಲ್ಲಿ ಸಾಕಷ್ಟು ಸಮರ್ಥರಿದ್ದಾರೆ. ಹಾಗಾಗಿ ನಮ್ಮಲ್ಲಿನವರಿಗೆ ನಮ್ಮ ವರಿಷ್ಠರು  ಅವಕಾಶ ಕೊಡಲಿ ಬಿಜೆಪಿ ಅಭ್ಯರ್ಥಿಗಳೇ ಆರಿಸಿ ಬರುತ್ತಾರೆ ಎಂದು ಲಿಂಬಿಕಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಬಂದಾಗ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿಗೆ ಸೇರಿಸುವ ಕುರಿತು ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದ್ದಾರಂತೆ. ಹಾಗಾಗಿ ಬಿ.ಎಸ್.ವೈ ಬಸವರಾಜ ಹೊರಟ್ಟಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ ಎಂಬ  ಪ್ರಶ್ನೆಗೆ ಆ ಬಗ್ಗೆ ನನಗೆ ಗೊತ್ತಿಲ್ಲ. ವೈಯಕ್ತಿಕವಾಗಿ ಏನೂ ಗೊತ್ತಿಲ್ಲ. ನನಗೆ ಇರುವ ಸ್ಪಷ್ಟವಾದ ಮಾಹಿತಿ ಪ್ರಕಾರ ಅವರೊಂದಿಗೆ ಬಿಜೆಪಿಯ ಯಾವ ಧುರೀಣರು ಮಾತನಾಡಿಲ್ಲ. ಅವರನ್ನು ಆಹ್ವಾನಿಸಿಲ್ಲ. ಹೀಗಾಗಿ ಅವರನ್ನು ಬಿಜೆಪಿ ಪಕ್ಷಕ್ಕೆ ಕರೆದುಕೊಳ್ಳುವ ಪ್ರಸಂಗವಿಲ್ಲ. ಅವರು ಅಭ್ಯರ್ಥಿಯಾಗುವ ಪ್ರಶ್ನೆ ಉದ್ಭವ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು .