ದಂಪತಿ ಸಾವಿಗೆ ಮರುಗಿದ ಜನ

ಸೈದಾಪುರ: ಬಟ್ಟೆ ವ್ಯಾಪಾರ ಮಾಡಿ ಜೀವನ ಸಾಗಿಸಿ ನೂರಾರು ಜನರಿಗೆ ಕೆಲಸ ಕೊಟ್ಟಿದ್ದ ರಾಘವೇಂದ್ರ ಅಯ್ಯ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಅವರ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ.
ಭಾನುವಾರ ಎಂದಿನಂತೆ ಬಟ್ಟೆ ವ್ಯಾಪಾರ ಮುಗಿಸಿಕೊಂಡು ಅಂಗಡಿ ಬಂದ್ ಮಾಡಿ ಕುಟುಂಬದ ಜತೆಗೆ ಕುಳಿತು ಊಟ ಮಾಡಿದ್ದರು.
ರಾಘವೇಂದ್ರ ದಂಪತಿಯ ಸಾವಿಗೆ ಸೈದಾಪುರ ಸೇರಿ ಸುತ್ತಮುತ್ತಲಿನ ಗ್ರಾಮ ಸ್ಥರು ಕಂಬನಿ ಮಿಡಿದಿದ್ದಾರೆ.
ಪಟ್ಟಣದಲ್ಲಿ ಬೆಂಕಿ ಅವಘಡ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಜನ ಸ್ಥಳಕ್ಕೆ ಗುಂಪು ಗುಂಪಾಗಿ ಬಂದರು. ಸಾರ್ವಜನಿಕರೇ ಮೃತ ದೇಹಗಳನ್ನು ಜೆಸಿಬಿ ಮೂಲಕ ಹೊರ ತೆಗೆದರು. ಈ ವೇಳೆ ಕುಟುಂಬಸ್ಥರ ಮತ್ತು ಪಟ್ಟಣದ ಜನರ ಆಕ್ರಂದನ ಮುಗಿಲು ಮುಟ್ಟಿತ್ತು.
ತಂದೆ-ತಾಯಿ ಸಾವಿನಿಂದಾಗಿ 10 ವರ್ಷದ ರುಶಿಲ್ ಹಾಗೂ 8 ವರ್ಷದ ವೇದಾಂಶ ಅನಾಥವಾಗಿದ್ದಾರೆ.
ಅಘೋಷಿತ ಬಂದ್: ರಾಘವೇಂದ್ರ ದಂಪತಿ ಸಾವಿನ ಸುದ್ದಿ ತಿಳಿದು ಪಟ್ಟಣದ ಎಲ್ಲ ವ್ಯಾಪಾರಿಗಳು ಸ್ವಇಚ್ಛೆಯಿಂದ ಅಂಗಡಿ-ಮುಂಗಟ್ಟು ಬಂದ್ ಮಾಡಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.