ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ ದಾಖಲೆಯನ್ನೂ ಮೀರಿಸಿದ ಎಎಪಿ: ಜೆ.ಪಿ.ನಡ್ಡಾ ಆರೋಪ

ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ ದಾಖಲೆಯನ್ನೂ ಮೀರಿಸಿದ ಎಎಪಿ: ಜೆ.ಪಿ.ನಡ್ಡಾ ಆರೋಪ

ವದೆಹಲಿ: ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಹಗರಣಗಳಿಗೆ ಹೆಸರುವಾಸಿಯಾಗುತ್ತಿದೆ. ಭ್ರಷ್ಟಾಚಾರದ ವಿಷಯದಲ್ಲಿ ಅದು ಕಾಂಗ್ರೆಸ್‌ ದಾಖಲೆಯನ್ನೂ ಮೀರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಆರೋಪಿಸಿದರು.

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ 'ಪಂಚ ಪರಮೇಶ್ವರ ಸಮ್ಮೇಳನ'ದಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಎಪಿಯನ್ನು ಸೋಲಿಸಲಿದೆ ಎಂದು ಹೇಳಿದರು.

'ಅರವಿಂದ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವು ಪರಿಶುದ್ಧ ಸರ್ಕಾರದ ಭರವಸೆ ನೀಡಿತ್ತು. ಆದರೆ ಅಬಕಾರಿ ಇಲಾಖೆ, ಡಿಟಿಸಿ ಬಸ್‌ಗಳ ಖರೀದಿ, ಶೌಚಾಲಯ ನಿರ್ಮಾಣ ಮತ್ತು ದೆಹಲಿ ಜಲಮಂಡಳಿಯಲ್ಲಿ ಹಗರಣಗಳನ್ನು ನಡೆಸಿದೆ. ಎಎಪಿಯ ಐವರು ಶಾಸಕರು ಜಾಮೀನಿನ ಮೇಲೆ ಹೊರಬಂದಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

'ದೆಹಲಿ ಸರ್ಕಾರ ನಡೆಸುತ್ತಿರುವ 745 ಶಾಲೆಗಳಲ್ಲಿ ಪ್ರಾಂಶುಪಾಲರಿಲ್ಲ. ಶೇಕಡ 70ರಷ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ಬೋಧನೆ ಮಾಡುವುದಿಲ್ಲ' ಎಂದು ಆರೋಪಿಸಿದರು.

'ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ಮಾನ್‌ ಭಾರತ ಯೋಜನೆ ಮೂಲಕ ಬಡ ಕುಟುಂಬಗಳಿಗೆ ನೆರವಾಗಿದ್ದಾರೆ. ಆದರೆ ಎಎಪಿ ಸರ್ಕಾರ ದೆಹಲಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ. ಕೇಜ್ರಿವಾಲ್ ಸರ್ಕಾರಕ್ಕೆ ಈವರೆಗೆ ದೆಹಲಿಯಲ್ಲಿ ಒಂದೇ ಒಂದು ಆಸ್ಪತ್ರೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ' ಎಂದು ಹೇಳಿದರು.