ರಸ್ತೆಯಿಲ್ಲದೇ ಅನಾರೋಗ್ಯಪೀಡಿತ ವೃದ್ದೆಯ ಪರದಾಟ

ಇಂದಿನ ಆಧುನಿಕ ಜಗತ್ತಿನಲ್ಲೂ ರಸ್ತೆ ಇರದೇ ಅನಾರೋಗ್ಯ ಪೀಡಿತ ಜನರು, ಗ್ರಾಮಸ್ಥರು ಪರದಾಡುವಂತಹ ಅಮಾನವೀಯ ಘಟನೆಗಳು ಕಂಡು ಬರುತ್ತಿವೆ. ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಘಟನೆ ಜರುಗಿದೆ. ಅನಾರೋಗ್ಯ ಪೀಡಿತ ವೃದ್ದೆಯನ್ನು ಕರೆದೊಯ್ಯಲು ರಸ್ತೆಯಿಲ್ಲದ್ದರಿಂದ ಗ್ರಾಮಸ್ಥರು ಜೋಳಿಗೆಯಲ್ಲೇ ವೃದ್ದೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಕಳಸ ತಾಲೂಕಿನ ಕಳಕೋಡು ಗ್ರಾಮದಲ್ಲಿ ಈ ಕರುಣಾಜನಕ ಘಟನೆ ಜರುಗಿದೆ. ಕಳಕೋಡು ಗ್ರಾಮದಿಂದ ಈಚಲುಹೊಳೆ ಗ್ರಾಮದವರೆಗೂ ಜೋಳಿಗೆಯಲ್ಲಿ ಸಾಗಾಟ ಮಾಡಲಾಗಿದೆ. ಕಂಬಕ್ಕೆ ಬೆಡ್ ಶೀಟ್ ಕಟ್ಟಿಕೊಂಡು ಜೋಳಿಗೆ ಮಾಡಿಕೊಂಡು ಅದರಲ್ಲಿಅನಾರೋಗ್ಯ ಪೀಡಿತ ವೃದ್ದೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 70 ವರ್ಷದ ಲಕ್ಷ್ಮಿ ಎನ್ನುವ ವೃದ್ದೆಯನ್ನು 4 ಕಿಲೋಮೀಟರ್ ವರೆಗೂ ಜೋಳಿಗೆಯಲ್ಲಿ ಗ್ರಾಮಸ್ಥರು ಸಾಗಿಸಿದ್ದಾರೆ . ಇಲ್ಲಿನ ಜನರು ನಿತ್ಯ ನರಕ ಅನುಭವಿಸುವಂತಾಗಿದ್ದು, ಹಲವು ದಶಕದಿಂದ ರಸ್ತೆ ಇಲ್ಲದೇ ಜನರ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಅನೇಕ ಬಾರಿ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸರಕಾರ, ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.