ಜಮ್ಮು-ಕಾಶ್ಮೀರದಲ್ಲಿ ಮೇಘ ಸ್ಫೋಟಕ್ಕೆ ಐವರು ಬಲಿ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮೇಘ ಸ್ಫೋಟಕ್ಕೆ ಐವರು ಮೃತಪಟ್ಟಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರಿ ಮಳೆಯಿಂದಾಗಿ ಪ್ರವಾಹವುಂಟಾಗಿದ್ದು, ಹಲವಾರು ಮನೆಗಳು ನಾಶವಾಗಿವೆ.
ಕಿಶ್ತ್ವಾರ್ ಜಿಲ್ಲೆಯ ಡಚ್ಚನ್ ತಹಸಿಲ್ ನ ಹೊನ್ಜಾರ್ ಗ್ರಾಮದಲ್ಲಿ ಮುಂಜಾನೆ ಸುಮಾರಿಗೆ ಮೇಘ ಸ್ಫೋಟಗೊಂಡಿದೆ. ಪ್ರವಾಹದಿಂದಾಗಿ ಐವರು ಮೃತಪಟ್ಟಿದ್ದು, ಅದರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಆರು ಮನೆಗಳು ಕುಸಿದಿವೆ ಎನ್ನಲಾಗಿದೆ. ಪೊಲೀಸರು, ಸೇನೆ, ರಾಜ್ಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಇನ್ನು ''ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಜನರನ್ನು ಮೇಲೆತ್ತಲು ವಾಯುಪಡೆಯ ಸಹಾಯಕ್ಕಾಗಿ ಸಂಪರ್ಕಿಸಲಾಗಿದೆ'' ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಉದ್ದಂಪುರ ಸಂಸದ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದೆ. ಜುಲೈ ಅಂತ್ಯದವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನದಿಗಳ ನೀರಿನ ಮಟ್ಟ ಏರಿಕೆಯಾಗಲಿದ್ದು, ಜನರು ಜಾಗರೂಕರಾಗಿ ಇರಬೇಕೆಂದು ಸೂಚಿಸಲಾಗಿದೆ.