ಪಂಜಾಬ್ ಭದ್ರತಾಲೋಪದ ತನಿಖೆ ನಡೆಸಲಿದ್ದಾರೆ ಸುಪ್ರೀಂಕೋರ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿರೋ ಲೇಡಿ ಜಡ್ಜ್

ನವದೆಹಲಿ: ಪಂಜಾಬ್‌ಗೆ ಪ್ರಧಾನಿ ಮೋದಿಯವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಆಗಿರುವ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಇದರ ವಿಚಾರಣೆ ನಡೆಸಲು ತನಿಖಾ ಸಮಿತಿಯನ್ನು ರಚಿಸಿದೆ.
ಈ ತನಿಖಾ ಸಮಿತಿಯಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ನೇತೃತ್ವ ವಹಿಸಲಿದ್ದಾರೆ.
ಇದನ್ನು ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್, ಈ ಘಟನೆ ಕುರಿತು ಏಕಪಕ್ಷೀಯವಾಗಿ ತನಿಖೆ ನಡೆಸಿ ಉತ್ತರ ನೀಡುವುದು ಸಮಂಜಸವಲ್ಲ, ಹೀಗಾಗಿ ನ್ಯಾಯಾಂಗದಲ್ಲಿ ತರಬೇತಿ ಪಡೆದವರು ಇದರ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿತ್ತು. ಅದರಂತೆ ಇದೀಗ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ನೇತೃತ್ವದ ಸಮಿತಿ ರಚಿಸಿ ಆದೇಶಿಸಿದೆ.
ಈ ಸಮಿತಿಯಲ್ಲಿ ಚಂಡಿಗಢನ ಡಿಜಿಪಿ (ಪೊಲೀಸ್ ಮಹಾನಿರ್ದೇಶಕರು), ರಾಷ್ಟ್ರೀಯ ತನಿಖಾದಳದ ಐಜಿ (IG Of NIA), ಪಂಜಾಬ್-ಹರ್ಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಮತ್ತು ಪಂಜಾಬ್ನ ಹೆಚ್ಚುವರಿ ಡಿಜಿಪಿ (ಭದ್ರತಾ ದಳ) ಉಳಿದ ಸದಸ್ಯರು.
ಅಂದಹಾಗೆ ಇದೀಗ ತನಿಖೆಯ ನೇತೃತ್ವ ವಹಿಸಿರುವ ದೆಹಲಿ ಮೂಲದ ಇಂದೂ ಮಲ್ಹೋತ್ರಾ ಅವರು, ಸುಪ್ರೀಂಕೋರ್ಟ್‌ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅದೇನೆಂದರೆ ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ಎರಡು ಬಗೆಯಲ್ಲಿ ನೇಮಕಾತಿ ನಡೆಯುತ್ತದೆ. ಒಂದನೆಯರು ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ಸುಪ್ರೀಂಕೋರ್ಟ್‌ಗೆ ನೇರವಾಗಿ ನೇಮಕಾತಿ ನಡೆದರೆ, ಇನ್ನೊಂದು ವಕೀಲಿ ವೃತ್ತಿ ನಡೆಸುತ್ತಿರುವವರನ್ನು ನೇರವಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಮಾಡಲಾಗುತ್ತದೆ.
ಇಂದೂ ಮಲ್ಹೋತ್ರಾ ಅವರು ವಕೀಲಿ ವೃತ್ತಿಯಿಂದ ನೇರವಾಗಿ ಸುಪ್ರೀಂಕೋರ್ಟ್‌ಗೆ ನೇಮಕಗೊಂಡಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇಷ್ಟೇ ಅಲ್ಲದೇ, ಸುಪ್ರೀಂಕೋರ್ಟ್‌ನ ಹಿರಿಯ ವಕೀಲೆ ಎಂಬ ಹೆಗ್ಗಳಿಕೆ ಪಡೆದಿರುವ ಎರಡನೆಯ ಮಹಿಳೆ ಕೂಡ ಇವರು. 2018ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಇವರು ನೇಮಕಗೊಂಡಿದ್ದರು.