ಬೆಂಗಳೂರು: ಕೈ ನೋಡಿ ಭವಿಷ್ಯ ಹೇಳ್ತೀನಿ ಎಂದು ವ್ಯಂಗ್ಯ. ಸಿಟ್ಟಿನಿಂದ ಸ್ನೇಹಿತನನ್ನೇ ಹತ್ಯೆಗೈದ
ಬೆಂಗಳೂರು : ಮದ್ಯದ ಅಮಲಿನಲ್ಲಿ ಕೈ ನೋಡಿ ಭವಿಷ್ಯ ಹೇಳುತ್ತ ಅಪಹಾಸ್ಯ ಮಾಡುತ್ತಿದ್ದ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ.
ಮೃತ ನರೇಶ್, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಗೋವಿಂದರಾಜನಗರದಲ್ಲಿ ವಾಸವಿದ್ದ. ಗಾರೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ. ಹೀಗಿರಬೇಕಾದರೆ ಮಾರ್ಚ್ 25 ರಂದು ಬೆಳಗ್ಗೆ 11 ಗಂಟೆಗೆ ಕಬ್ಬಿನ ಹಾಲು ಕುಡಿದು ಬರ್ತಿನಿ ಅಂತಾ ಮನೆಯಿಂದ ಹೊರ ಬಂದವನು ಕೊಲೆಯಾಗಿದ್ದಾನೆ. ಬಾರ್ಗೆ ಒಟ್ಟೊಟ್ಟಿಗೆ ಹೋಗಿದ್ದ ಸ್ನೇಹಿತನೇ ಭೀಕರವಾಗಿ ಕೊಂದಿದ್ದಾನೆ.
ಭವಿಷ್ಯ ಹೇಳ್ತೀನಿ ಎಂದವನನ್ನೇ ಬರ್ಬರವಾಗಿ ಕೊಲೆ
ನರೇಶ್ ಎಂಬಾತನನ್ನ ಕೊಂದು ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಮಾರಿಮುತ್ತು ಹೆಚ್ಚು ಯಾರೊಂದಿಗೂ ಬೆರೆಯದ ವಿಚಿತ್ರ ಮನಸ್ಥಿತಿಯವನಾಗಿದ್ದ ಅನ್ನೋದು ಗೊತ್ತಾಗಿದೆ. ಹನ್ನೊಂದು ವರ್ಷದವನಿದ್ದಾಗಲೇ ವಿಜಯನಗರ ವ್ಯಾಪ್ತಿಯಲ್ಲಿ ಒಂದು ಹತ್ಯೆ ಮಾಡಿ ಸೆರೆವಾಸ ಅನುಭವಿಸಿ ಹೊರಬಂದಿದ್ದ. ಮಾರ್ಚ್ 24ರ ಮಧ್ಯಾಹ್ನ ಮಾರಿಮುತ್ತು ಜೊತೆ ಬಾರಿಗೆ ಹೋಗಿದ್ದ ನರೇಶ್ ನಿನ್ನ ಭವಿಷ್ಯ ಹೇಳ್ತೀನಿ ಎಂದಿದ್ದ. ಈ ವೇಳೆ ‘ನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ, ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ’ ಎಂದು ಆತನನ್ನ ರೇಗಿಸಲಾರಂಭಿಸಿದ್ದ. ಸಿಟ್ಟಿಗೆದ್ದ ಮಾರಿಮುತ್ತು ಮತ್ತು ನರೇಶ್ ಬಾರ್ ಒಳಗಡೆ ಪರಸ್ಪರ ಕಿತ್ತಾಡಿಕೊಂಡಿದ್ದರು. ಜಗಳವಾಡುತ್ತಲೇ ಇಬ್ಬರೂ ಹೊರಬಂದಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ್ ತಲೆಗೆ ಹೊಡೆದಿದ್ದ ಮಾರಿಮುತ್ತು ಪರಾರಿಯಾಗಿದ್ದ. ಕುಸಿದುಬಿದ್ದು ನರೇಶ್ ಸಾವನ್ನಪ್ಪಿದ್ದ.
ಮೃತನ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಸ್ನೇಹಿತರೆಂದರೆ ತಮಾಷೆ..ರೇಗಿಸೋದು ಎಲ್ಲಾ ಇದ್ದೇ ಇರತ್ತೆ. ಇದೇ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡೊ ಹಂತಕ್ಕೆ ಹೋಗಿದ್ದು ನಿಜಕ್ಕೂ ದುರಂತ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ