ತಡೆಯಾಜ್ಞೆ ತೆರವಾದರೂ ಒಟಿಟಿಯಲ್ಲಿ ಪ್ರಸಾರವಾಗಲ್ಲ 'ವರಾಹ ರೂಪಂ' ಹಾಡು!

ತಡೆಯಾಜ್ಞೆ ತೆರವಾದರೂ ಒಟಿಟಿಯಲ್ಲಿ ಪ್ರಸಾರವಾಗಲ್ಲ 'ವರಾಹ ರೂಪಂ' ಹಾಡು!

'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡು ಬಳಸದಂತೆ ನೀಡಿದ್ದ ತಡೆಯಾಜ್ಞೆಯನ್ನು ಕೇರಳದ ಕೋಳಿಕ್ಕೊಡ್ ಜಿಲ್ಲಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ನೀಡಿದೆ.

ಕೋಳಿಕ್ಕೊಡ್ ನ್ಯಾಯಾಲಯವು 'ಕಾಂತಾರ' ಸಿನಿಮಾದ ನಿರ್ಮಾಪಕರ ಪರವಾಗಿ ಆದೇಶ ನೀಡಿದ್ದರೂ ಸಹ 'ವರಾಹ ರೂಪಂ' ಹಾಡನ್ನು ಈ ಹಿಂದಿನ ಮಾದರಿಯಲ್ಲಿ ಬಳಸಲಾಗುತ್ತಿಲ್ಲ

'ವರಾಹ ರೂಪಂ' ಹಾಡು ನಮ್ಮ ನವರಸಂ ಆಲ್ಬಂನ ಹಾಡಿನ ನಕಲು, ಹಾಗಾಗಿ ಆ ಹಾಡು ಬಳಸದಂತೆ ತಡೆಯಾಜ್ಞೆ ನೀಡಬೇಕೆಂದು ಥೈಕ್ಕುಡಂ ಬ್ರಿಡ್ಜ್ ಸಂಗೀತ ತಂಡವು ಕೋಳಿಕ್ಕೊಡ್ ನ್ಯಾಯಾಲಯದ ಮೊರೆ ಹೋಗಿತ್ತು. ಅಂತೆಯೇ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಲಾಗಿತ್ತು. ಹಾಗಾಗಿ ಒಟಿಟಿಯಲ್ಲಿ ಬಿಡುಗಡೆ ಆದ 'ಕಾಂತಾರ' ಸಿನಿಮಾದಲ್ಲಿ ಬೇರೆ ಸಂಗೀತ ಬಳಸಲಾಗಿತ್ತು.

ಈಗ ಆದೇಶ 'ಕಾಂತಾರ' ಚಿತ್ರತಂಡದ ಪರವಾಗಿದೆಯಾದರೂ ಹಳೆಯ ಮಾದರಿಯಲ್ಲಿ ಹಾಡನ್ನು ಬಳಸುತ್ತಿಲ್ಲ. ಕಾರಣ ಇದೇ ಹಾಡಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣ ಬಾಕಿ ಇದ್ದು ಅದು ಇತ್ಯರ್ಥವಾದ ಬಳಿಕವಷ್ಟೆ ಹಾಡನ್ನು ಬಳಸಲು ಚಿತ್ರತಂಡ ಯೋಜಿಸಿದೆ.

ಕೋಳಿಕ್ಕೊಡ್ ಜಿಲ್ಲಾ ನ್ಯಾಯಾಲಯದಲ್ಲಿ ಥೈಕ್ಕುಡಂ ಬ್ರಿಡ್ಜ್ ಸಂಗೀತ ತಂಡ ದಾವೆ ಹೂಡಿದ್ದರೆ, 'ನವರಸಂ' ಹಾಡಿನ ಹಕ್ಕು ಹೊಂದಿರುವ ಮಾತೃಭೂಮಿ ಪ್ರಿಂಟಿಂಗ್ ಆಂಡ್ ಪಬ್ಲಿಕೇಶನ್ಸ್ ಸಂಸ್ಥೆ ಕೇರಳದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು 'ವರಾಹ ರೂಪಂ' ಹಾಡನ್ನು ಬಳಸದಂತೆ ಆದೇಶ ನೀಡಿತ್ತು. ಅಲ್ಲಿ ತಡೆಯಾಜ್ಞೆ ತೆರವು ಆದೆಶ ಹೊರಬಿದ್ದಿಲ್ಲವಾದ್ದರಿಂದ ಈಗಲೇ ಹಳೆಯ ಮಾದರಿಯಲ್ಲಿ 'ವರಾಹ ರೂಪಂ' ಹಾಡನ್ನು ಬಳಸುವಂತಿಲ್ಲ.

'ವರಾಹ ರೂಪಂ' ಹಾಡು ಬರೆದಿರುವ ಶಶಿರಾಜ್ ಕಾವೂರ್ ಅವರೇ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ ಎನ್ನಲಾಗುತ್ತಿದೆ. ಅವರು ವಕೀಲರೂ ಆಗಿದ್ದಾರೆ. ಕೋಳಿಕ್ಕೊಡ್ ಜಿಲ್ಲಾ ನ್ಯಾಯಾಲಯದಲ್ಲಿ ದೊರಕಿರುವ ಗೆಲುವು ಚಿತ್ರತಂಡಕ್ಕೆ ಬಹಳ ಖುಷಿ ನೀಡಿದೆ. ಗೋವಾದಿಂದ ದೆಹಲಿಗೆ ಹೋಗುತ್ತಿದ್ದ ರಿಷಬ್ ಶೆಟ್ಟಿ ಕರೆ ಮಾಡಿ ಖುಷಿ ವ್ಯಕ್ತಪಡಿಸಿದರು ಎಂದಿದ್ದಾರೆ ಶಶಿರಾಜ್.

ದೇವರು, ದೈವಗಳ ಆಶೀರ್ವಾದದಿಂದ ಈಗ ಒಂದು ಗೆಲುವು ದೊರಕಿದೆ. ಪಾಲಕ್ಕಾಡ್ ನ್ಯಾಯಾಲಯದಲ್ಲಿಯೂ ಗೆಲುವು ನಮ್ಮದೇ ಆಗುವ ವಿಶ್ವಾಸವಿದೆ. ಪಾಲಕ್ಕಾಡ್ ನ್ಯಾಯಾಲಯದಲ್ಲಿ ಗೆಲುವು ಧಕ್ಕಿದರೆ 'ವರಾಹ ರೂಪಂ' ಹಾಡನ್ನು ಈ ಹಿಂದಿನಂತೆ ಬಳಸಲಾಗುತ್ತದೆ ಎಂದಿದ್ದಾರೆ ಶಶಿರಾಜ್.