ರಾಜ್‌ ಕುಟುಂಬವನ್ನು ಕಾಡುತ್ತಿದೆ ಒಂದು ಸಮಸ್ಯೆ: ಚಿರಂಜೀವಿ ಬೇಸರ

ರಾಜ್‌ ಕುಟುಂಬವನ್ನು ಕಾಡುತ್ತಿದೆ ಒಂದು ಸಮಸ್ಯೆ: ಚಿರಂಜೀವಿ ಬೇಸರ

ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೂ ಡಾ.ರಾಜ್‌ಕುಮಾರ್ ಕುಟುಂಬ ಹಲವು ದಶಕಗಳಿಂದ ಅವಿನಾಭಾವ ಸಂಬಂಧ. ಇಬ್ಬರ ಮನೆಯಲ್ಲಿ ಏನೇ ಶುಭ ಸಮಾರಂಭಗಳು ನಡೆದಾಗಲೂ ಪರಸ್ಪರರ ಕುಟುಂಬಗಳು ಭಾಗಿಯಾಗುತ್ತವೆ. ಈ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ರಾಜ್‌ಕುಮಾರ್ ಕುರಿತು ಹಾಗೂ ಅವರ ಕುಟುಂಬದ ಕುರಿತು ವಿಶೇಷ ಪ್ರೀತಿ ಇಟ್ಟುಕೊಂಡಿರುವ ಚಿರಂಜೀವಿ, ಅಪ್ಪುವಿನ ನಿಧನದಿಂದ ತೀವ್ರ ದುಃಖಕ್ಕೆ ಒಳಗಾಗಿದ್ದರು.

ಅಪ್ಪು ನಿಧನ ಹೊಂದಿ 22 ದಿನಗಳ ನಂತರವೂ ಚಿರಂಜೀವಿಯನ್ನು ಇನ್ನೂ ಕಾಡುತ್ತಲೇ ಇದೆ.

ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ ಚಿರಂಜೀವಿ ಆ ಕಾರ್ಯಕ್ರಮದಲ್ಲಿಯೂ ಪುನೀತ್ ಸಾವನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ, ಡಾ ರಾಜ್‌ಕುಮಾರ್ ಕುಟುಂಬವನ್ನು ಕಾಡುತ್ತಿರುವ ಸಮಸ್ಯೆಯೊಂದರ ಬಗ್ಗೆ ಮಾತನಾಡಿದ್ದಾರೆ. ಚಿರಂಜೀವಿ ಆಡಿರುವ ಮಾತುಗಳು ಅವರಿಗೆ ರಾಜ್‌ ಕುಟುಂಬದ ಮೇಲೆ ಇರುವ ಪ್ರೀತಿಯನ್ನು ಗೊತ್ತು ಮಾಡುತ್ತಿವೆ.


ನನ್ನ ಸಿನಿಮಾರಂಗದ ಮಿತ್ರ ಪುನೀತ್ ರಾಜ್‌ಕುಮಾರ್: ಚಿರಂಜೀವಿ

ಯೋಧಾ ಡಯಾಗ್ನೆಸ್ಟಿಕ್ ಸರ್ವೀಸ್ ಲೋಕಾರ್ಪಣೆ ಸಮಾರಂಭದಲ್ಲಿ ನಟ ಚಿರಂಜೀವಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಚಿರಂಜೀವಿ, ''ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ನನ್ನ ಮಿತ್ರರೊಬ್ಬರಿದ್ದಾರೆ ಪುನೀತ್ ರಾಜ್‌ಕುಮಾರ್ ಎಂದು. ಅವರು ರಾಜ್‌ಕುಮಾರ್ ಕುಟುಂಬದ ವ್ಯಕ್ತಿ ಹಠಾತ್ತನೆ ನಿಧನ ಹೊಂದಿದ್ದಾರೆ. ಸಣ್ಣ ವಯಸ್ಸಿಗೆ ಅವರು ನಿಧನ ಹೊಂದಿರುವುದು ಕೋಟ್ಯಂತರ ಹೃದಯಗಳಿಗೆ ಸಂಕಟ ತಂದಿದೆ'' ಎಂದಿದ್ದಾರೆ.

ರಾಜ್‌ಕುಮಾರ್ ಕುಟುಂಬಕ್ಕೆ ಸಮಸ್ಯೆ ಇದೆ: ಚಿರಂಜೀವಿ

''ಡಾ.ರಾಜ್‌ಕುಮಾರ್ ಕುಟುಂಬಕ್ಕೆ ಹೃದಯ ಸಂಬಂಧಿ ಕಾಯಿಲೆಯ ಇತಿಹಾಸವಿದೆ. ರಾಜ್‌ಕುಮಾರ್ ಅವರೂ ಸಹ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ನಿಧನ ಹೊಂದಿದರು. ಅವರ ಮೊದಲ ಮಗ ಶಿವರಾಜ್ ಕುಮಾರ್‌ಗೆ ಸಹ ಹೃದಯ ಸಂಬಂಧಿ ಸಮಸ್ಯೆ ಇದೆ. ಅವರು ಆಂಜಿಯೋ ಚಿಕಿತ್ಸೆ ಪಡೆದುಕೊಂಡು ಈಗ ಚೆನ್ನಾಗಿದ್ದಾರೆ. ರಾಜ್‌ಕುಮಾರ್ ಅವರ ಎರಡನೇ ಮಗ ರಾಘವೇಂದ್ರ ಅವರಿಗೆ ಹೃದಯ ಹಾಗೂ ಮೆದುಳು ಸಂಬಂಧಿ ಸಮಸ್ಯೆ ಇದೆ. ಅವರು ಸಮಸ್ಯೆಗಳ ನಡುವೆಯೇ ಬದುಕುತ್ತಿದ್ದಾರೆ'' ಎಂದಿದ್ದಾರೆ ಚಿರಂಜೀವಿ.

''ಫಿಟ್‌ ಆಗಿದ್ದರು, ವ್ಯಾಯಾಮ ಮಾಡುತ್ತಿದ್ದರು, ಒಳ್ಳೆಯ ಆಹಾರ ಸೇವಿಸುತ್ತಿದ್ದರು'

''ಇನ್ನು ಕೊನೆಯ ಪುತ್ರ ಪುನೀತ್ ರಾಜ್‌ಕುಮಾರ್ ಬಹಳ ಆರೋಗ್ಯವಂತರಾಗಿದ್ದರು. ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರು. ಒಳ್ಳೆಯ ಆಹಾರ ಸೇವಿಸುತ್ತಿದ್ದರು. ದುರಭ್ಯಾಸಗಳು ಇರಲಿಲ್ಲ. ನನಗೆ ಹೃದಯ ಸಮಸ್ಯೆ ಬರುವುದಿಲ್ಲ ಅಂದುಕೊಂಡಿದ್ದರು. ಆದರೆ ಕುಟುಂಬದ ವಂಶವಾಹಿನಿಯಲ್ಲಿ ಹೃದಯ ಸಮಸ್ಯೆ ಇದೆ ಎಂಬುದು ಅವರಿಗೆ ಗೊತ್ತಿದ್ದರೆ ಅವರು ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದರೇನೋ? ಮುನ್ನೆಚ್ಚರಿಕೆ ವಹಿಸಿ ಇಂದು ಬದುಕಿರುತ್ತಿದ್ದರೇನೋ? ಆದರೆ ಆತನಿಗೆ ಮುಂದಾಗಿ ಇದರ ಸೂಚನೆ ಸಿಗದ ಕಾರಣ, ಕೇವಲ 46 ವರ್ಷ ವಯಸ್ಸಿನಲ್ಲಿಯೇ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಇಷ್ಟು ಸಣ್ಣ ವಯಸ್ಸಿಗೆ ನಿಧನ ಹೊಂದಿರುವುದು ಪ್ರತಿಯೊಬ್ಬರ ಹೃದಯಕ್ಕೆ ಸಂಕಟ ತಂದಿದೆ, ಇದೊಂದು ದುರಾದೃಷ್ಟಕರ ಸಂಗತಿ'' ಎಂದಿದ್ದಾರೆ ಚಿರಂಜೀವಿ.

ಭೇಟಿ ನೀಡಿದ್ದ ಚಿರಂಜೀವಿ, ರಾಮ್ ಚರಣ್ ತೇಜ

ಪುನೀತ್ ರಾಜ್‌ಕುಮಾರ್ ನಿಧನವಾದಾಗ ಅಂತಿಮ ದರ್ಶನಕ್ಕೆ ನಟ ಚಿರಂಜೀವಿ ಆಗಮಿಸಿದ್ದರು. ಶಿವರಾಜ್ ಕುಮಾರ್ ಅವರನ್ನು ತಬ್ಬಿಕೊಂಡು ಸಾಂತ್ವನ ಹೇಳಿದ್ದರು. ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಲ ಒಳ್ಳೆಯ ಮಾತುಗಳನ್ನಾಡಿ ತೆರಳಿದ್ದರು. ಅಂತ್ಯಕ್ರಿಯೆ ಬಳಿಕ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಸಹ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳಿದ್ದರು. ಪುನೀತ್ ಸಮಾಧಿ ಮುಂದೆ ನಿಂತು ಕಣ್ಣೀರು ಹಾಕಿದ್ದರು ರಾಮ್ ಚರಣ್ ತೇಜ. ಚಿರಂಜೀವಿ ಕುಟುಂಬದವರೇ ಆದ ನಟ ಅಲ್ಲು ಅರ್ಜುನ್ ಸಹ ಪುನೀತ್ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.