ಸರ್ವಾಧಿಕಾರವೊಂದೇ ಪರಿಹಾರ": ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆದದ್ದಕ್ಕೆ ಕಂಗನಾ ಆಕ್ರೋಶ

ಸರ್ವಾಧಿಕಾರವೊಂದೇ ಪರಿಹಾರ": ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆದದ್ದಕ್ಕೆ ಕಂಗನಾ ಆಕ್ರೋಶ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೃಷಿ ಕಾಯ್ದೆಗಳಿಗೆ ತಂದಿದ್ದ ತಿದ್ದುಪಡಿಯನ್ನು ಹಿಂಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಘೋಷಣೆ ಮಾಡಿದ್ದರು. ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಈ ನಿರ್ಧಾರದ ಕುರಿತು ಪರ-ವಿರೋಧ ಚರ್ಚೆಗಳು ಆರಂಭವಾಗಿದೆ.

ಈ ನಡುವೆ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆದದ್ದಕ್ಕೆ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯೋರ್ವರ ಟ್ವೀಟ್‌ ಅನ್ನು ಆಧರಿಸಿ ಕಂಗನಾ ಇನ್‌ ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಿದ್ದು, "ದುಃಖ, ಅವಮಾನಕರ, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದ್ದಾರೆಯೇ ಹೊರತು ಸಂಸತ್ತಿನಲ್ಲಿ ಆಯ್ಕೆ ಮಾಡಿದ ಸರ್ಕಾರವಲ್ಲ, ಹಾಗಾದರೆ ಇದು ಕೂಡ ಜಿಹಾದಿ ರಾಷ್ಟ್ರವಾಗಿದೆ. ಈ ರೀತಿ ಆಗಲು ಬಯಸಿದ ಎಲ್ಲರಿಗೂ ಅಭಿನಂದನೆಗಳು. ' ಎಂದು ಉಲ್ಲೇಖಿಸಿದ್ದಾರೆ.

ಎರಡನೇ ಪೋಸ್ಟ್‌ನಲ್ಲಿ, ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಚಿತ್ರವನ್ನು ಹಂಚಿಕೊಂಡಿದ್ದು, "ರಾಷ್ಟ್ರದ ಆತ್ಮಸಾಕ್ಷಿಯು ಆಳವಾದ ನಿದ್ರೆಯಲ್ಲಿರುವಾಗ, ಲಾತ್ (ಬೆತ್ತ) ಒಂದೇ ಪರಿಹಾರ ಮತ್ತು ಸರ್ವಾಧಿಕಾರವು ಏಕೈಕ ಪರಿಹಾರವಾಗಿದೆ... ಜನ್ಮದಿನದ ಶುಭಾಶಯಗಳು ಮೇಡಂ ಪ್ರೈಮ್‌ ಮಿನಿಸ್ಟರ್"‌ ಎಂದು ಬರೆದುಕೊಂಡಿದ್ದಾರೆ.