ರಾಯಚೂರು | ಆಲ್ಕೋಡ್ ಹನುಮಂತಪ್ಪಗೆ ಟಿಕೆಟ್ ನೀಡಲು ಒತ್ತಾಯ
ಹಟ್ಟಿಚಿನ್ನದಗಣಿ: ಅನುಭವಿ ಹಾಗೂ ಕಳಂಕ ರಹಿತ ರಾಜಕಾರಣಿಯಾದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಅವರಿಗೆ ಕಾಂಗ್ರೆಸ್ ಪಕ್ಷವು ಲಿಂಗಸುಗೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಬೇಕು ಎಂದು ಅವರ ಅಭಿಮಾನಿ ಬಳಗದ ಮುಖಂಡ ಜೆ.ಎಸ್.ಹನುಮಂತ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಮೀಸಲು ಕ್ಷೇತ್ರವಾದ ಲಿಂಗಸುಗೂರು ಕ್ಷೇತ್ರದಲ್ಲಿ ಮೂಲ ಅಸ್ಪೃಶ್ಯರಿಗೆ ಆದ್ಯತೆ ನೀಡಬೇಕು. ಕಳೆದ ಮೂರು ಚುನಾವಣೆಗಳಲ್ಲಿ ಮೂಲ ಅಸ್ಪೃಶ್ಯರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ. ಹನುಮಂತಪ್ಪ ಆಲ್ಕೋಡ್‌ಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ. ದೇವದುರ್ಗ ತಾಲ್ಲೂಕಿನಲ್ಲಿ ಅವರು ಶಾಸಕರಾಗಿ, ಮಂತ್ರಿಯಾಗಿ ಮಾಡಿದ ಕಾರ್ಯಗಳೇ ಅವರ ಗೆಲುವುಗೆ ಶ್ರೀರಕ್ಷೆಯಾಗಿವೆ ಎಂದರು.
ಕ್ಷೇತ್ರದಲ್ಲಿ ಚಿನ್ನ ಉತ್ಪಾದಿಸುವ ದೇಶದ ಏಕೈಕ ಉದ್ಯಮವಿದ್ದು, ಇದರ ವಿಸ್ತರಣೆಗಾಗಿ ಹೊಸದಾಗಿ 14 ಗಣಿಗಳ ಅನ್ವೇಷಣೆ, ಗಣಿ ಕಂಪನಿಯಲ್ಲಿ 12,000 ಉದ್ಯೋಗಗಳ ಭರ್ತಿ, ಕಂಪನಿ ಆಸ್ಪತ್ರೆಯನ್ನು ಮಲ್ಟಿ ಸ್ಷೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಗೇರಿಸು ವುದು. ನೀರಾವರಿ ವಂಚಿತ ಪ್ರದೇಶದಲ್ಲಿ ನೀರಾವರಿ ಕಲಿಸುವ ಉದ್ದೇಶ ಆಲ್ಕೋಡ್ ಅವರು ಹೊಂದಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷವು ಇವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮೂಲ ಅಸ್ಪೃಶ್ಯರಲ್ಲಿ ಕೆಲವರು ಟಿಕೆಟ್ ಕೇಳುತ್ತಿದ್ದಾರೆ. ಅವರೆಲ್ಲರಿಗೆ ಹೋಲಿಸಿದರೆ ಆಲ್ಕೋಡ್ ಹನುಮಂತಪ್ಪ ಅವರು ಅನುಭವಿ ರಾಜಕಾರಣಿ. ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ನ್ಯಾಯದಡಿ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಅಭಿಮಾನಿ ಬಳಗದವರಾದ ಮಲ್ಲಿಕಾರ್ಜುನ್, ಕೆ.ಬಾಬು, ರಾಮಣ್ಣ, ಶಿವರಾಜ ಕರಡಿ, ಶಿವಪುತ್ರಪ್ಪ ಮಾಚನೂರು ಇದ್ದರು.