ಚೀನವೇ ಭಾರತದ ನಮ್ಮ ನಂ.1 ಶತ್ರು

ಹೊಸದಿಲ್ಲಿ: “ಚೀನವು ಭಾರತದ ಅತೀ ದೊಡ್ಡ ಭದ್ರತಾ ಅಪಾಯವಾಗಿ ಮಾರ್ಪಾಡಾಗಿದೆ. ಹೀಗಾಗಿ ಕಳೆದ ವರ್ಷ ಹಿಮಾಲಯದ ಗಡಿಯ ರಕ್ಷಣೆಗೆಂದು ರವಾನಿಸಲಾದ ಸಾವಿ ರಾರು ಯೋಧರ ಪಡೆಗಳು ಹಾಗೂ ಶಸ್ತ್ರಾಸ್ತ್ರಗಳು ಇನ್ನೂ ಸುದೀರ್ಘ ಅವಧಿಗೆ ವಾಪಸ್ ಬರಲು ಸಾಧ್ಯವಿಲ್ಲ.’
ಇಂಥದ್ದೊಂದು ಕಳವಳಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದು ರಕ್ಷಣ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್.
ಎರಡು ಅಣ್ವಸ್ತ್ರ-ಸಜ್ಜಿತ ದೇಶಗಳ ನಡುವಿನ ಗಡಿ ವಿವಾದವನ್ನು ಬಗೆ ಹರಿಸಲು “ವಿಶ್ವಾಸದ ಕೊರತೆ’ ಮತ್ತು “ಹೆಚ್ಚುತ್ತಿರುವ ಸಂದೇಹ’ವೇ ಅಡ್ಡ ಬರುತ್ತಿದೆ ಎಂದೂ ರಾವತ್ ಹೇಳಿದ್ದಾರೆ. ಕಳೆದ ತಿಂಗಳು ಭಾರತ ಮತ್ತು ಚೀನದ ಸೇನಾ ಕಮಾಂಡರ್‌ಗಳ ನಡುವೆ 13ನೇ ಸುತ್ತಿನ ಮಾತುಕತೆ ನಡೆದಿದ್ದರೂ, ಗಡಿಯಿಂದ ಸೇನೆಯ ಹಿಂಪಡೆತ ವಿಚಾರದಲ್ಲಿ ಮಾತುಕತೆ ವಿಫಲವಾಗಿತ್ತು.
ದುಸ್ಸಾಹಸ ಎದುರಿಸಲು ಸನ್ನದ್ಧ: ಅರುಣಾಚಲ ಪ್ರದೇಶದಲ್ಲಿ ಭಾರತದ ಭೂಪ್ರದೇಶದೊಳಕ್ಕೆ ಚೀನೀ ಸೇನೆ ನುಸುಳಿಲ್ಲ. ಅವರು ಭಾರತದ ಭೂಭಾಗದಲ್ಲಿ ಹಳ್ಳಿಗಳನ್ನು ನಿರ್ಮಿಸಿದ್ದಾರೆ ಎನ್ನುವುದು ಸುಳ್ಳು. ಆದರೆ, ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿನ ಚೀನದ ಭೂಭಾಗದಲ್ಲಿ ಅಲ್ಲಿನ ಸೇನೆ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ.
ಆ ಗ್ರಾಮಗಳಲ್ಲಿ ತನ್ನ ನಾಗರಿಕರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವುದು ಅಥವಾ ಎಲ್‌ಎಸಿಯುದ್ದಕ್ಕೂ ಭವಿಷ್ಯದಲ್ಲಿ ತನ್ನ ಸೇನೆಯನ್ನು ನಿಯೋಜಿಸುವುದು ಆ ದೇಶದ ತಂತ್ರವಾಗಿರ ಬಹುದು. ಆದರೆ ಗಡಿ ಪ್ರದೇಶದಲ್ಲಿ ಮತ್ತು ಸಮುದ್ರದಲ್ಲಿ ಚೀನದ ಯಾವುದೇ ದುಸ್ಸಾಹಸವನ್ನು ಎದುರಿಸಲೂ ಭಾರತ ಸಿದ್ಧವಾಗಿದೆ ಎಂದಿದ್ದಾರೆ.