ರಣಜಿ ಕ್ರಿಕೆಟ್ | ಕರ್ನಾಟಕಕ್ಕೆ ಮಯಂಕ್ ಅಗರವಾಲ್ ಆಸರೆ

ರಣಜಿ ಕ್ರಿಕೆಟ್ | ಕರ್ನಾಟಕಕ್ಕೆ ಮಯಂಕ್ ಅಗರವಾಲ್ ಆಸರೆ

ತಿರುವನಂತಪುರ: ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕೇರಳ ತಂಡದ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸುವ ಹಾದಿಯಲ್ಲಿ ತಾಳ್ಮೆಯ ಬ್ಯಾಟಿಂಗ್‌ಗೆ ಮೊರೆಹೋಗಿದೆ.

ನಾಯಕ ಮಯಂಕ್ ಅಗರವಾಲ್ (ಬ್ಯಾಟಿಂಗ್ 87; 159ಎ, 4X4, 6X3) ತಂಡಕ್ಕೆ ಆಸರೆಯಾಗಿದ್ದಾರೆ.

ಸಚಿನ್ ಬೇಬಿ ಶತಕ ಹಾಗೂ ಜಲಜ್ ಸಕ್ಸೇನಾ ಅರ್ಧಶತಕದ ಬಲದಿಂದ ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 342 ರನ್‌ಗಳನ್ನು ಗಳಿಸಿದೆ. ಎರಡನೇ ದಿನದಾಟದ ಮುಕ್ತಾಯಕ್ಕೆ ಕರ್ನಾಟಕವು 49 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 137 ಗಳಿಸಿದೆ. ಮಯಂಕ್ ಮತ್ತು ನಿಕಿನ್ ಜೋಸ್ (ಬ್ಯಾಟಿಂಗ್ 16) ಕ್ರೀಸ್‌ನಲ್ಲಿದ್ದಾರೆ. ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 205 ರನ್‌ಗಳನ್ನು ಗಳಿಸಬೇಕಿದೆ.

ಮೊದಲ ದಿನವಾದ ಮಂಗಳವಾರ ಕೇರಳ ತಂಡವು 90 ಓವರ್‌ಗಳಲ್ಲಿ 6 ವಿಕೆಟ್‌ಗಳೀಗೆ 224 ರನ್ ಗಳಿಸಿತ್ತು. 116 ರನ್ ಗಳಿಸಿದ್ದ ಸಚಿನ್ ಮತ್ತು 31 ರನ್ ಹೊಡೆದಿದ್ದ ಜಲಜ್ ಕ್ರೀಸ್‌ನಲ್ಲಿದ್ದರು. ಬುಧವಾರ ಬೆಳಿಗ್ಗೆ ಇನಿಂಗ್ಸ್ ಮುಂದುವರಿಸಿದ ಸಚಿನ್ ತಮ್ಮ ಮೊತ್ತಕ್ಕೆ ಮತ್ತೆ 24 ರನ್‌ ಸೇರಿಸಿದರು. ಜೊತೆಗೆ ತಂದ ಮೊತ್ತವನ್ನೂ ಹೆಚ್ಚಿಸಿದರು. ಇನ್ನೊಂದಡೆ ಜಲಜ್ ಕೂಡ ಅವರಿಗೆ ಜೊತೆ ನೀಡಿದರು.

ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಸಚಿನ್ (141; 307ಎ, 4X17, 6X1) ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಫೀಲ್ಡರ್‌ ಮನೀಷ್ ಪಾಂಡೆ ಚುರುಕಾಗಿ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಇನ್ನೊಂದೆಡೆ ಬ್ಯಾಟ್ ಬೀಸುತ್ತಿದ್ದ ಜಲಜ್ ಸಕ್ಸೆನಾ (57; 134ಎ, 4X7, 6X1) ಅವರ ಆಟಕ್ಕೆ ಮಧ್ಯಮವೇಗಿ ಕೌಶಿಕ್ ತಡೆಯೊಡ್ಡಿದರು. ಮೊದಲ ದಿನ ನಾಲ್ಕು ವಿಕೆಟ್ ಗಳಿಸಿ ಮಿಂಚಿದ್ದ ಕೌಶಿಕ್ ಐದು ವಿಕೆಟ್‌ಗಳ ಗೊಂಚಲು ಪೂರೈಸಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ನಿಧೀಶ್ ವಿಕೆಟ್ ಕೂಡ ಉರುಳಿಸಿ, ಕೇರಳ ಇನಿಂಗ್ಸ್‌ಗೆ ತೆರೆಯೆಳೆದರು.

ಆರಂಭಿಕ ಆಘಾತ: ಕರ್ನಾಟಕದ ಆರಂಭ ಚೆನ್ನಾಗಿರಲಿಲ್ಲ. ಟೂರ್ನಿಯಲ್ಲಿ 3 ಶತಕ ಗಳಿಸಿರುವ ಆರ್. ಸಮರ್ಥ್ ಇನಿಂಗ್ಸ್‌ನ 4ನೇ ಎಸೆತ ದಲ್ಲಿಯೇ ವೈಶಾಕ್ ಚಂದ್ರನ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಅವರು ಇಲ್ಲಿ ಖಾತೆ ತೆರೆಯಲಿಲ್ಲ. ಮಯಂಕ್ ಮತ್ತು ದೇವದತ್ತ ಪಡಿಕ್ಕಲ್ ಜೊತೆಗೂಡಿ 2ನೇ ವಿಕೆ ಟ್‌ಗೆ 89 ರನ್‌ ಸೇರಿಸಿದರು. 28ನೇ ಓವರ್‌ ನಲ್ಲಿ ದೇವದತ್ತ ಅವರು ನಿಧೀಶ್ ಎಸೆತ ದಲ್ಲಿ ಬೌಲ್ಡ್ ಆದರು. ಮಯಂಕ್ ಜೊತೆಗೂಡಿದ ನಿಕಿನ್ ವಿಕೆಟ್ ಪತನ ತಡೆದರು.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಕೇರಳ:
 130.1 ಓವರ್‌ಗಳಲ್ಲಿ 342 (ಸಚಿನ್ ಬೇಬಿ 141, ಜಲಜ್ ಸಕ್ಸೇನಾ 57, ಸಿಜೊ ಮನ್ 24, ವಿ.ಕೌಶಿಕ್ 54ಕ್ಕೆ6, ಶ್ರೇಯಸ್ ಗೋಪಾಲ್ 69ಕ್ಕೆ2)
ಕರ್ನಾಟಕ: 49 ಓವರ್‌ಗಳಲ್ಲಿ 2 ವಿಕೆಟ್‌ಗೆ 137 (ಮಯಂಕ್ ಬ್ಯಾಟಿಂಗ್ 87, ನಿಕಿನ್ ಜೋಸ್ ಬ್ಯಾಟಿಂಗ್ 16, ವೈಶಾಖ ಚಂದ್ರನ್ 37ಕ್ಕೆ1, ನಿಧೀಶ್ 29ಕ್ಕೆ1)