ವಿಮಾ ಕಂಪನಿ ವಿರುದ್ಧ ಕೋನರಡ್ಡಿ ದೂರು
ಹುಬ್ಬಳ್ಳಿ: 'ಧಾರವಾಡ ಜಿಲ್ಲೆಯಲ್ಲಿ ಬೆಳೆವಿಮೆ ಗುತ್ತಿಗೆ ಪಡೆದ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿ ರೈತರಿಗೆ ಪರಿಹಾರ ನೀಡದೆ ವಂಚಿಸಿದೆ' ಎಂದು ಜೆಡಿಎಸ್ ಮುಖಂಡರ ಎನ್.ಎಚ್. ಕೋನರಡ್ಡಿ ಆರೋಪಿಸಿದ್ದಾರೆ.
ಶನಿವಾರ ಗೋಕುಲ ಪೊಲೀಸ್ ಠಾಣೆಯಲ್ಲಿ ವಿಮಾ ಕಂಪನಿ ವಿರುದ್ಧ ದೂರು ಸಲ್ಲಿಸಿ ಅವರು ಮಾತನಾಡಿದರು. 'ಅತಿವೃಷ್ಟಿ, ನೈಸರ್ಗಿಕ ವಿಕೋಪ, ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾದರೆ ಅಥವಾ ಮಳೆಯಿಲ್ಲದೆ ಹಾನಿಯಾದರೆ ವಿಮಾ ಕಂಪನಿ ಪರಿಹಾರ ನೀಡಬೇಕು. ಆದರೆ, ಕಂಪನಿ ರೈತರಿಂದ ಹಣ ತುಂಬಿಸಿಕೊಂಡು 2018-2021ರವರೆಗೆ ಪರಿಹಾರ ನೀಡದೆ ವಂಚಿಸಿದೆ' ಎಂದು ದೂರಿದರು.
'ಸಮಸ್ಯೆ ಪರಿಹಾರಕ್ಕೆ ವಿಮಾ ಕಂಪನಿಯವರಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. 100 ಮಂದಿ ರೈತರು ಅರ್ಜಿ ಸಲ್ಲಿಸಿದರೆ, ಐದು ಮಂದಿಗೆ ಮಾತ್ರ ಪರಿಹಾರ ನೀಡುತ್ತಾರೆ. ಅರ್ಜಿ ಪಡೆದ ರೈತರಿಗೆ ಸ್ವೀಕೃತಿ ನೀಡುವುದಿಲ್ಲ. ಈ ಕುರಿತು ತನಿಖೆ ಕೈಗೊಂಡು ರೈತರಿಗೆ ನ್ಯಾಯ ನೀಡಬೇಕೆಂದು ದೂರು ನೀಡಲಾಗಿದೆ' ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಶಿವಣ್ಣ ಹುಬ್ಬಳ್ಳಿ, ಸಾದಿಕ್ ಹಕಿಂ, ಸಿದ್ದು ತೇಜಿ, ಚಂದ್ರಗೌಡ ಪಾಟೀಲ, ಮುತ್ತು ಕಾಲವಾಡ, ಮಹಾಂತೇಶ ಗಂಗಾಧರಮಠ, ಪರ್ವೇಜ್ ಕಟ್ಟಿಮನಿ, ಆನಂದ ಹಬೀಬ, ಎಸ್.ಜಿ. ಕೊಣ್ಣೂರ, ವೈ. ಎಂ. ಕಲಾಲ ಇದ್ದರು.