ಕಾಂಗ್ರೆಸ್ ಗೆಲುವಿಗೆ ನಾನು ಏಜೆಂಟ್ ಆಗಲು ಸಿದ್ಧನಿದ್ದೇನೆ: ಸತೀಶ ಜಾರಕಿಹೊಳಿ

ಬೆಳಗಾವಿ: 'ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕಾದ್ದರಿಂದ ಗೋಕಾಕ ತಾಲ್ಲೂಕಿನಲ್ಲಿ ನಾನು ಏಜೆಂಟ್, ಕ್ಲರ್ಕ್, ಸಹಾಯಕ ಆಗಲು ಸಿದ್ಧನಿದ್ದೇನೆ. ಅವರನ್ನಷ್ಟೆ (ಪ್ರತಿಸ್ಪರ್ಧಿಗಳು) ಬಿಟ್ಟರೆ ಕಷ್ಟವಾಗುತ್ತದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಶನಿವಾರ ಹೇಳಿದರು.
ಗೋಕಾಕದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಈ ಚುನಾವಣೆಯಲ್ಲಿ ಗೋಕಾಕ ಹಾಗೂ ಅರಭಾವಿಯಲ್ಲಿ ಶೇ 30ರಷ್ಟು ಮತಗಳು ನಮಗೆ ಬರಲಿವೆ. ನಮ್ಮ ಬೆಂಬಲಿಗರೇ 60ರಿಂದ 70 ಮತದಾರರಿದ್ದಾರೆ' ಎಂದು ತಿಳಿಸಿದರು.
'ನಾನು ಗೋಕಾಕ ತಾಲ್ಲೂಕಿನ ಗುಜನಾಳ ಮತಗಟ್ಟೆ ಏಜೆಂಟ್ ಆಗುತ್ತೇನೆ. ಮುಖಂಡ ಅಶೋಕ ಪೂಜಾರಿ ಅವರನ್ನು ಮಮದಾಪುರಕ್ಕೆ ಹಾಕಿದ್ದೇವೆ. ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿಲ್ಲವಾದರೂ ಏಜೆಂಟ್ ಆಗುವುದಕ್ಕೆ ತೊಂದರೆ ಇಲ್ಲ. ಚುನಾವಣೆ ಆದ ಮೇಲೆ ಪಕ್ಷ ಸೇರಲಿದ್ದಾರೆ' ಎಂದು ಸ್ಪಷ್ಟಪಡಿಸಿದರು.
'ಪುತ್ರ, ಪುತ್ರಿಯನ್ನೂ ಏಜೆಂಟ್ ಮಾಡುತ್ತೇವೆ. ಪ್ರತಿ ಪಂಚಾಯಿತಿಗೂ ಇಬ್ಬರನ್ನು ನಿಯೋಜಿಸಲಾಗುವುದು. ಉಪಾಹಾರ, ಊಟ ಎರಡನ್ನೂ ಪಂಚಾಯಿತಿ ಮುಂದೆಯೇ ಅವರಿಗೆ ನೀಡಲಾಗುವುದು. ಮತಪೆಟ್ಟಿಗೆ ಸೀಲ್ ಆಗುವವರೆಗೂ ಅಲ್ಲಿಯೇ ಇದ್ದು ಕಣ್ಣಿಡಲಿದ್ದಾರೆ' ಎಂದು ತಿಳಿಸಿದರು.