ಡಾ.ಎಚ್.ಸಿ.ಮಹದೇವಪ್ಪ ಪುತ್ರಗೆ ಮತ್ತೆ ನಿರಾಸೆ

ಡಾ.ಎಚ್.ಸಿ.ಮಹದೇವಪ್ಪ ಪುತ್ರಗೆ ಮತ್ತೆ ನಿರಾಸೆ

ಬೆಂಗಳೂರು, ಮಾರ್ಚ್ 25: ಮಾಜಿ ಲೋಕೋಪಯೋಗಿ ಇಲಾಖೆಯ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪಗೆ, ಪಕ್ಷ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಆದರೆ, ಅವರ ಪುತ್ರ ಸುನಿಲ್ ಬೋಸ್ ಗೆ ಮತ್ತೆ ನಿರಾಸೆಯಾಗಿದೆ. ಅವರು ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಕಾಂಗ್ರೆಸ್ ಬಿಡುಗಡೆ ಮಾಡಿರುವ 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ತಿ.ನರಸೀಪುರ (ಮೀಸಲು) ಕ್ಷೇತ್ರದಿಂದ ಡಾ.ಎಚ್.ಸಿ.ಮಹದೇವಪ್ಪನವರಿಗೆ ಟಿಕೆಟ್ ನೀಡಲಾಗಿದೆ. ಇನ್ನು, ಮತ್ತೊಂದು ಮೀಸಲು ಕ್ಷೇತ್ರವಾದ ನಂಜನಗೂಡಿನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ.ಧ್ರುವನಾರಾಯಣ ಅವರ ಪುತ್ರ ದರ್ಶನ್ ಧೃವನಾರಾಯಣ ಅವರಿಗೆ ನೀಡಲಾಗಿದೆ. ಧ್ರುವನಾರಾಯಣ ಅವರ ನಿಧನದಿಂದ ಬಹುತೇಕ ಅವರ ಪುತ್ರನಿಗೆ ಟಿಕೆಟ್ ಎನ್ನುವುದು ಕನ್ಫರ್ಮ್ ಆಗಿತ್ತು.

ತಿ.ನರಸೀಪುರದಿಂದ ಮಹಾದೇವಪ್ಪ ಮತ್ತು ನಂಜನಗೂಡಿನಿಂದ ಅವರ ಪುತ್ರ ಸುನಿಲ್ ಬೋಸ್ ಟಿಕೆಟಿಗಾಗಿ ಪ್ರಯತ್ನ ನಡೆಸಿದ್ದರು. ಆದರೆ, ನಂಜನಗೂಡಿನಿಂದ ಧೃವನಾರಾಯಣ, ಕಳಲೆ ಶ್ರೀನಿವಾಸಮೂರ್ತಿ ಕೂಡಾ ಟಿಕೆಟಿಗಾಗಿ ಪ್ರಯತ್ನಿಸುತ್ತಿದ್ದರು. ಡಿ.ಕೆ.ಶಿವಕುಮಾರ್ ಅವರ ಆಪ್ತರಾಗಿದ್ದ ಧೃವನಾರಾಯಣ ಮತ್ತು ಸಿದ್ದರಾಮಯ್ಯನವರ ಆಪ್ತರಾಗಿದ್ದ ಮಹದೇವಪ್ಪನವರ ಪುತ್ರ ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಎನ್ನುವುದು ನಿಶ್ಚಿತವಾಗಿತ್ತು.

ಆದರೆ, ಬದಲಾದ ಸನ್ನಿವೇಶದಲ್ಲಿ ಧೃವನಾರಾಯಣ ಪುತ್ರನಿಗೇ ಟಿಕೆಟ್ ನೀಡುವಂತೆ ಮಹದೇವಪ್ಪ ಹೇಳಿಕೆಯನ್ನು ನೀಡಿದ್ದರು. ಈ ವಿಚಾರ ಆ ಭಾಗದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ಧೃವನಾರಾಯಣ ಅವರ ಅಕಾಲಿಕ ಸಾವಿಗೆ ಮಹದೇವಪ್ಪನವರೇ ಪರೋಕ್ಷ ಕಾರಣ ಎನ್ನುವ ಆಪಾದನೆಯೂ ಕೇಳಿ ಬಂದಿತ್ತು. ಇದನ್ನು ಖುದ್ದು ಮಹದೇವಪ್ಪನವರೇ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.

"ಯಾರೋ ಕೆಲವರು ಧೃವನಾರಾಯಣ ಅವರ ಸಾವಿಗೆ ಮಹದೇವಪ್ಪನವರೇ ಕಾರಣ ಎಂದು ಸುದ್ದಿ ಹರಡಿಸಲು ಶುರು ಮಾಡಿದಾಗ ನನಗೆ ಅತೀವವಾದ ಬೇಸರವಾಯಿತು. ನಂಜನಗೂಡು ವಿಷಯಕ್ಕೆ ಬರುವುದಾದರೆ ಅಲ್ಲಿ ಹಿಂದೆ ಉಪ ಚುನಾವಣೆ ಸಂದರ್ಭವು ಏರ್ಪಟ್ಟಾಗ ನಮ್ಮ ಸುನಿಲ್ ಬೋಸ್ ಗೆ ಪಕ್ಷ ಸಂಘಟನೆ ಮಾಡಿ ಎಂದು ಆದೇಶ ಬಂದಿತ್ತು, ಅದರಂತೆಯೇ ಅವರು ಪಕ್ಷ ಸಂಘಟನೆಯಲ್ಲಿದ್ದಾಗ ಆತನಿಗೇ ಟಿಕೆಟ್ ನೀಡಿ ಎಂಬ ಕೂಗೂ ಸಹ ಇತ್ತು" ಎಂದು ಡಾ.ಎಚ್.ಸಿ.ಮಹದೇವಪ್ಪನವರು ಹೇಳಿದ್ದರು.

ಸುನಿಲ್ ಬೋಸ್ ಟಿಕೆಟಿಗಾಗಿ ಕಳೆದ ಬಾರಿಯೂ ಪ್ರಯತ್ನವನ್ನು ನಡೆಸಿದ್ದರು. ಆದರೆ, ಕಳೆದ ಬಾರಿ ಅವರಿಗೆ ಟಿಕೆಟ್ ಮಿಸ್ ಆಗಿತ್ತು. ಈ ಬಾರಿ ತಿ.ನರಸೀಪುರ ಅಥವಾ ನಂಜನಗೂಡಿನಿಂದ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ ಆಗಿತ್ತು. ಆದರೆ, ಅವರ ತಂದೆ ಮಹದೇವಪ್ಪನವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ನೀಡಿದೆ. ಆ ಮೂಲಕ, ಸುನಿಲ್ ಬೋಸ್ ಮತ್ತೆ ನಿರಾಸೆ ಪಡುವಂತಾಗಿದೆ.