ಹಾವೇರಿ ಶಾಸಕ ನೆಹರು ಓಲೇಕಾರಗೂ ಅನರ್ಹತೆ ಭೀತಿ!

ಹಾವೇರಿ ಶಾಸಕ ನೆಹರು ಓಲೇಕಾರಗೂ ಅನರ್ಹತೆ ಭೀತಿ!

ಬೆಂಗಳೂರು, ಮಾರ್ಚ್ 25; ಸೂರತ್ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಕರ್ನಾಟಕದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಹಾವೇರಿಯ ಬಿಜೆಪಿ ಶಾಸಕ ನೆಹರು ಓಲೇಕಾರ್‌ಗೂ ಅನರ್ಹತೆ ಭೀತಿ ಎದುರಾಗಿದೆ.

ಏಕೆಂದರೆ ಅವರು ತಮ್ಮ ವಿರುದ್ಧದ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಯಾವುದೇ ಆದೇಶ ನೀಡಿದೆ ವಿಲೇವಾರಿ ಮಾಡಿದೆ.

ಸದ್ಯಕ್ಕೆ ನೆಹರು ಓಲೇಕಾರ್‌ಗೆ ರಿಲೀಫ್ ಸಿಕ್ಕಿಲ್ಲ. ಒಂದು ವೇಳೆ ಹೈಕೋರ್ಟ್ ತಡೆಯಾಜ್ಞೆ ನೀಡದಿದ್ದರೆ ಓಲೇಕಾರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಲಾಗದು. ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ದೋಷಿಯಾಗಿ ತೀರ್ಮಾನಿಸಿದ ಅಧೀನ ನ್ಯಾಯಾಲಯ ಆದೇಶಕ್ಕೆ ತಡೆ ನೀಡಲು ಕೋರಿ ಬಿಜೆಪಿ ಶಾಸಕ ನೆಹರು ಓಲೇಕಾರ್‌ಗೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಈ ಕುರಿತು ಶಾಸಕರು ಸಲ್ಲಿಕೆ ಮಾಡಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠದಲ್ಲಿ ನಡೆಯಿತು. ಓಲೇಕಾರ್ ಪರ ವಕೀಲರು, ಅರ್ಜಿದಾರರನ್ನು ದೋಷಿಯಾಗಿ ತೀರ್ಮಾನಿಸಿ ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು. ಈಗಾಗಲೇ ಅರ್ಜಿದಾರರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿರುವ ಅಧೀನ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆ ಮನವಿ ಪರಿಶೀಲಿಸಿದ ನ್ಯಾಯಪೀಠ, ಸಮರ್ಪಕ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಓಲೇಕಾರ್ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಕರಣ ಸಂಬಂಧ ನೆಹರು ಓಲೇಕಾರ್ ಅವರವನ್ನು ದೋಷಿಯಾಗಿ ತೀರ್ಮಾನಿಸಿ ಮತ್ತು ಅವರಿಗೆ ಎರಡು ವರ್ಷ ಸಾಧಾರಣಾ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (91ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ) 2023ರ ಫೆ.13ರಂದು ಹೊರಡಿಸಿತ್ತು. ಈ ತೀರ್ಪು ಪ್ರಶ್ನಿಸಿ ಓಲೇಕರ್‌ಗೆ ಹೈಕೊರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಮಾ.2ರಂದು ಓಲೇಕಾರ್‌ಗೆ ವಿಧಿಸಿದ್ದ ಎರಡು ವರ್ಷದ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿದ ಹೈಕೋರ್ಟ್, ಜಾಮೀನು ಮಂಜೂರು ಮಾಡಿತ್ತು.

ಇದೀಗ ದೋಷಿಯಾಗಿ ತೀರ್ಮಾನಿಸಿರುವ ಆದೇಶದ ಭಾಗಕ್ಕೆ ತಡೆ ನೀಡಲು ಕೋರಿದ್ದಾರೆ. ಓಲೇಕಾರ್ ಅವರನ್ನು ದೋಷಿಯಾಗಿರುವ ತೀರ್ಮಾನಿಸಿರುವ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡದೆ ಹೋದರೆ, ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾನೂನಾತ್ಮಕ ತೊಡಕು ಉಂಟಾಗಲಿದೆ ಎಂಬ ಮಾತು ಕೇಳಿಬಂದಿದೆ.

ಯಾವ ಪ್ರಕರಣದಲ್ಲಿ ಶಾಸಕರು ದೋಷಿ ನೆಹರು ಓಲೇಕಾರ್‌ 2008-13ರವರೆಗೆ ಶಾಸಕರಾಗಿದ್ದ ಅವಧಿಯಲ್ಲಿ ಹಾವೇರಿ ನಗರಸಭೆಯ ಕಾಮಗಾರಿಗಳನ್ನು ತಮ್ಮ ಪುತ್ರರಿಗೆ ಗುತ್ತಿಗೆ ಕೊಡಿಸಿದ್ದರು. ಐದು ಕಾಮಗಾರಿಗಳನ್ನು ನಡೆಸದಿದ್ದರೂ, ಕಾಮಗಾರಿಗಳು ನಡೆದಿವೆ ಎಂದು ನಕಲಿ ಬಿಲ್ ಸೃಷ್ಟಿಸಿ, ಒಟ್ಟು 5,35 ಕೋಟಿ ರೂ ಪಡೆದು ವಂಚನೆ ಮಾಡಿದ್ದರು ಎಂಬುದು ಆರೋಪ. ಕಾಮಗಾರಿ ಮಾಡದಿದ್ದರೂ ಇಬ್ಬರು ಪುತ್ರರಿಗೆ ಗುತ್ತಿಗೆ ಕೊಡಿಸಿ ಸ್ವಜನ ಪಕ್ಷಪಾತ ಮಾಡಿದ್ದಾರೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.

ಸಾಮಾಜಿಕ ಕಾರ್ಯಕರ್ತ ಶಶಿಧರ್ ಮಹದೇವಪ್ಪ ಹಳ್ಳಿಕೆರೆ ಹಾವೇರಿಯ ಲೋಕಾಯುಕ್ತ ಕೋರ್ಟ್‌ಗೆ ಖಾಸಗಿ ದೂರು ದಾಖಲು ಮಾಡಿದ್ದರು. ದೂರಿನ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ನಂತರ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಸುಧೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ನೆಹರು ಓಲೇಕಾರ್, ಅವರ ಪುತ್ರರಾದ ಮಂಜುನಾಥ್ ಓಲೇಕಾರ್, ದೇವರಾಜ್ ಓಲೇಕಾರ್ ನಿವೃತ್ತ ಅಧಿಕಾರಿಗಳಾದ ಎಚ್. ಕೆ. ರುದ್ರಪ್ಪ ಸೇರಿ ಒಟ್ಟು 9 ಮಂದಿ ಆರೋಪಿಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಅಡಿಯಲ್ಲಿ ದೋಷಿಯಾಗಿ ತೀರ್ಮಾನಿಸಿ ಆದೇಶ ನೀಡಿತ್ತು. ಎಲ್ಲಾ ಆರೋಪಿಗಳಿಗೂ ತಲಾ ಎರಡು ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂ. ದಂಡ ವಿಧಿಸಿತ್ತು.