ಡ್ರಾಪ್ ನೀಡಿ ಮಹಿಳೆಯ ಮೊಬೈಲ್ ಎಗರಿಸಿದ ರ‍್ಯಾಪಿಡೋ ಬೈಕ್ ಸವಾರ
ಬೆಂಗಳೂರು - ಡ್ರಾಪ್ ಮಾಡುವ ನೆಪದಲ್ಲಿ ಮಹಿಳೆಯನ್ನು ರ‍್ಯಾಪಿಡೋ ಬೈಕ್ಲ್ಲಿ ಕರೆದೊಯ್ದ ಸವಾರ ಮಾರ್ಗಮಧ್ಯೆ ಆಕೆಯ ಮೊಬೈಲ್ ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಸ್ತಾಫಾ ಪರಾರಿಯಾಗಿರುವ ಆರೋಪಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕೈಗೊಂಡಿದ್ದಾರೆ.ಮಹಿಳೆಯೊಬ್ಬರು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದು, ಆ ಸಂದರ್ಭದಲ್ಲಿ ಬಂದ ಮುಸ್ತಾಫಾ ಎಂಬ ಸವಾರ ಮಹಿಳೆ ಹೇಳಿದ ಜಾಗಕ್ಕೆ ಡ್ರಾಪ್ ಮಾಡಿದ್ದಾರೆ.
ಆ ಸಂದರ್ಭದಲ್ಲಿ ಮಹಿಳೆಯು ರ‍್ಯಾಪಿಡೋ ಬೈಕ್ ಸವಾರ ಮುಸ್ತಾಫಾನ ಮೊಬೈಲ್ ನಂಬರ್ ಪಡೆದಿದ್ದು, ಮತ್ತೆ ಎಲ್ಲಿಗಾದರೂ ಹೋಗಬೇಕಾದೆ ನಿಮಗೆ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಹತ್ತು ದಿನಗಳ ಹಿಂದೆ ಮುಸ್ತಾಫಾಗೆ ಕರೆ ಮಾಡಿ ಕೆಆರ್ ಪುರಂ ಗೆ ಹೋಗಲು ಡ್ರಾಪ್ ಮಾಡಬೇಕೆಂದು ಮಹಿಳೆ ತಿಳಿಸಿದಾಗ, ನಾನು ಕೆಲಸ ಬಿಟ್ಟಿದ್ದೀನಿ ಮೇಡಂ ಎಂದು ತಿಳಿಸಿದ್ದಾನೆ.
ನಂತರ ಡ್ರಾಪ್ ಮಾಡುವುದಾಗಿ ಹೇಳಿ ಮಹಿಳೆ ಹೇಳಿದ ಸ್ಥಳಕ್ಕೆ ಮುಸ್ತಾಫಾ ಬಂದು ಮಹಿಳೆಯನ್ನು ಬೈಕ್ನಲ್ಲಿ ಕೆಆರ್ ಪುರಕ್ಕೆ ಡ್ರಾಪ್ ಮಾಡಲು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಬೈಕ್ ನಿಲ್ಲಿಸಿದ್ದಾನೆ. ಮಹಿಳೆಗೆ ಅನುಮಾನ ಬಾರದಂತೆ ಬೈಕ್ ಪರಿಶೀಲಿಸಿದಂತೆ ನಟಿಸಿ, ಮೇಡಂ ಬೈಕ್ ಕೆಟ್ಟು ಹೋಗಿದೆ. ಮೆಕಾನಿಕ್ಗೆ ಫೋನ್ ಮಾಡಬೇಕು. ನನ್ನ ಮೊಬೈಲ್ ನಲ್ಲಿ ಚಾರ್ಜ್ ಇಲ್ಲ. ನಿಮ್ಮ ಮೊಬೈಲ್ ಕೊಡಿ ಮೆಕಾನಿಕ್ಗೆ ಕರೆ ಮಾಡುವುದಾಗಿ ಹೇಳಿ ಆ ಮಹಿಳೆಯಿಂದ ದುಬಾರಿ ಬೆಲೆಯ ಮೊಬೈಲ್ ಪಡೆದು ಬೈಕ್ನಲ್ಲಿ ಪರಾರಿಯಾಗಿದ್ದಾನೆ. ರ‍್ಯಾಪಿಡೋ ಬೈಕ್ ಸವಾರ ಮೊಬೈಲ್ ದರೋಡೆ ಮಾಡಿಕೊಂಡು ಹೋದ ಬಗ್ಗೆ ಆ ಮಹಿಳೆ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.