2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಪಿಸಿಸಿ ಕೆಲವೊಂದು ಮಾನದಂಡಗಳನ್ನು ನಿಗದಿ ಪಡಿಸಿದೆ. ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಪಿಸಿಸಿ ಕೆಲವೊಂದು ಮಾನದಂಡಗಳನ್ನು ನಿಗದಿ ಪಡಿಸಿದೆ, ಗೆಲ್ಲುವ ಸಾಮರ್ಥ್ಯ, ಪಕ್ಷದಲ್ಲಿನ ಹಿರಿತನ, ಚುನಾವಣೆಗೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಸಾಮರ್ಥ್ಯ ಮತ್ತು ಕ್ಷೇತ್ರದಲ್ಲಿನ ಜನಪ್ರಿಯತೆ ಪ್ರಮುಖವಾಗಿವೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಟಿಕೆಟ್ ಆಕಾಂಕ್ಷಿಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 1-3 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲು ಮತ್ತು ಪಟ್ಟಿಯನ್ನು ಕಳುಹಿಸಲು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುವ ಸಮಿತಿಗಳನ್ನು ರಚಿಸಿದ್ದಾರೆ. ಜಿಲ್ಲಾ ಚುನಾವಣಾ ಸಮಿತಿಯು ಜಿಲ್ಲೆಯ ಮಂಚೂಣಿ ಘಟಕಗಳ, ವಿಭಾಗಗಳ ಮತ್ತು ಸೆಲ್ಗಳ ಅಧ್ಯಕ್ಷರುಗಳ ಜೊತೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಸ್ಥಳೀಯ ಜನತೆಯ ವಿಶ್ವಾಸವನ್ನು ಹೊಂದಿರುವ ಮತ್ತು ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿರುವ ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ ನೀಡುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲು ತಿಳಿಸಲಾಗಿದೆ. ಸಮಿತಿಯ ಸದಸ್ಯರು ತಮ್ಮ ತಮ್ಮ ಜಿಲ್ಲೆಗಳಲ್ಲಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಿರ್ಣಯಿಸಿ, ಎಲ್ಲಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸರ್ವಾನುಮತದ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕು ಎಂದು ಶಿವಕುಮಾರ್ ಹೇಳಿದರು.