ಲಂಚದಿಂದ ಪಕ್ಷ ಕಟ್ಟಿದ್ದಲ್ಲ: ಕಾಂಗ್ರೆಸ್‌ ನಾಯಕರಿಗೆ ಪ್ರಮೋದ್‌ ಮಧ್ವರಾಜ್ ತಿರಗೇಟು

ಲಂಚದಿಂದ ಪಕ್ಷ ಕಟ್ಟಿದ್ದಲ್ಲ: ಕಾಂಗ್ರೆಸ್‌ ನಾಯಕರಿಗೆ ಪ್ರಮೋದ್‌ ಮಧ್ವರಾಜ್ ತಿರಗೇಟು

ಡುಪಿ: ಲಂಚದಿಂದ ಅಥವಾ ಇನ್ನೊಬ್ಬರ ಜೇಬಿನ ಹಣದಿಂದ ಪಕ್ಷ ಕಟ್ಟಿದ್ದಲ್ಲ. ನಮ್ಮ ಕುಟುಂಬ ಸ್ವಂತ ಹಣದಿಂದ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿತ್ತು ಮತ್ತು ಸ್ವಜನ ಪಕ್ಷಪಾತವನ್ನು ಮಾಡಿಲ್ಲ. ಬೇರೆ ಪಕ್ಷದಿಂದ ಕಾಂಗ್ರೆಸ್‌ ಗೆ ಬರಬಹುದು, ಆದರೆ ಕಾಂಗ್ರೆಸ್‌ನಿಂದ ಬೇರೆ ಪಕ್ಷಕ್ಕೆ ಹೋಗಬಾರದೇ?

ಪ್ರಪಂಚದ ಮೊದಲ ಪಕ್ಷಾಂತರಿಯೂ ನಾನಲ್ಲ. ರಾಜಕೀಯ ಸನ್ನಿವೇಶಗಳಿಗೆ ಪಕ್ಷಾಂತರ ಸಾಮಾನ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿರುಗೇಟು ನೀಡಿದರು.

ಉಪ್ಪೂರು ಅಮ್ಮುಂಜೆಯ ಸ್ವಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕರ್ನಾಟಕ ರೈತ ಸಂಘ, ಭಾರತೀಯ ಲೋಕದಳ, ಸಮಾಜವಾದಿ ಜನತಾಪಕ್ಷ, ಜನತಾದಳ, ಜನತಾದಳ ಜಾತ್ಯಾತೀತ(ಜೆಡಿಎಸ್‌) ಮತ್ತು ಕಾಂಗ್ರೆಸ್‌ ಹೀಗೆ ಐದಾರು ಪಕ್ಷ ಬದಲಿದ್ದಾರೆ. ಜೆಡಿಎಸ್‌ ನಿಂದ ಉಪಮುಖ್ಯಮಂತ್ರಿಯಾಗಿದ್ದರೂ ಆ ಪಕ್ಷಕ್ಕೆ ನಿಷ್ಠೆ ತೊರಲಿಲ್ಲ. ಅವರು ಪಕ್ಷಾಂತರ ಬಗ್ಗೆ ಮಾತನಾಡುವುದಲ್ಲಿ ಅರ್ಥವೇ ಇಲ್ಲ ಎಂದರು.

ಜ.22ರಂದು ಉಡುಪಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ನನ್ನ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿರುವ ಸಿದ್ದರಾಮಯ್ಯ ಅವರ ಸಂಸ್ಕಾರ, ಸೌಜನ್ಯ ಏನೆಂಬುದು ತಿಳಿಯುತ್ತದೆ. ಅವರ ಭಾಷೆಯಲ್ಲಿ ಉತ್ತರ ನೀಡಬಹುದು. ಆದರೆ, ನಾವಷ್ಟು ಸಂಸ್ಕಾರ ಹೀನರಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಲು ಅಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದರು. ಸಿದ್ದರಾಮಯ್ಯ ಅವರು ತಮ್ಮ ಸ್ವಾರ್ಥಕ್ಕಾಗಿ ಮೈಸೂರು ಕ್ಷೇತ್ರದ ಬದಲಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದರು. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ನನ್ನ ಪರವಾಗಿ ಪ್ರಚಾರ ಮಾಡಿದ್ದಾರೆ. ಜೆಡಿಎಸ್‌ ನಿಂದ ಚುನಾವಣೆಗೆ ಬಂದಿರುವ ಹಣವನ್ನು ಕಾಂಗ್ರೆಸ್‌ ನ ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್‌ ಅಧ್ಯಕ್ಷರು ಪಡೆದಿದ್ದಾರೆ. ನಾನೆಂದೂ ಜೆಡಿಎಸ್‌ ಪಕ್ಷದ ಬಾವುಟ ಹಿಡಿದು ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ತಾಂತ್ರಿಕವಾಗಿ ಬಿ ಫಾರ್ಮ್ ಪಡೆಯಲು ಸದಸ್ಯತ್ವ ಪಡೆದು, ಚುನಾವಣೆ ಅನಂತರ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದ್ದೇ ತಪ್ಪು ಎಂದಾದಲ್ಲಿ ಅಂದೇ ಪಕ್ಷದಿಂದ ಉಚ್ಛಾಟನೆ ಮಾಡಬಹುದಿತ್ತಲ್ಲ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಬಿಜೆಪಿಗೆ ಸ್ಪಷ್ಟ ಬಹುಮತ

ತಂದೆ ಮಲ್ಪೆ ಮಧ್ವರಾಜ್‌ ಅವರು ಸ್ವಂತ ಹಣದಿಂದ ಕಾಂಗ್ರೆಸ್‌ ಪಕ್ಷ ಕಟ್ಟಿದ್ದರು. ತಾಯಿ ಮನೋರಮ್ಮ ಮಧ್ವರಾಜ್‌ ಅವರ ಪ್ರಮಾಣಿಕತೆ, ಕಾರ್ಯಬದ್ಧತೆಗೆ ಪಕ್ಷ ಟಿಕೆಟ್‌ ನೀಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ನೆಲಕಚ್ಚಿದ್ದ ಸಂದರ್ಭದಲ್ಲಿ ಪುನರ್ಜೀವನ ನೀಡುವ ಕಾರ್ಯವನ್ನು ಮಾಡಿದ್ದೇನೆ. ಈಗ ಕಾಂಗ್ರೆಸ್‌ ದೊಡ್ಡ ಭ್ರಮೆಯಲ್ಲಿದೆ. ಟಿಕೆಟ್‌ ಹಂಚಿಕೆ ಆರಂಭವಾಗುತ್ತಿದ್ದಂತೆ ಅವರಲ್ಲಿ ಒಳಜಗಳ ಹೆಚ್ಚಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 5 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ರಾಜ್ಯದಲ್ಲಿ 150 ಸೀಟುಗಳೊಂದಿಗೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಪಕ್ಷ ಟಿಕೆಟ್‌ ನೀಡಿದರೆ ಸ್ಪರ್ಧಿಸಿ, ಜಯಗಳಿಸಿ ಜನಸೇವೆ ಮಾಡುತ್ತೇನೆ. ಇಲ್ಲವಾದರೆ ಪಕ್ಷದ ಸೇವೆ ಮಾಡುತ್ತೇನೆ. ಟಿಕೆಟ್‌ ಹಂಚಿಕೆಯನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ. ಜನ ಸೇವೆಗೆ ಆತ್ಮ ಶುದ್ಧವಿರಬೇಕು. ಬಿಜೆಪಿಗೆ ಸೇರಿದ್ದಕ್ಕೆ ಜನರು ಖುಷಿಪಟ್ಟಿದ್ದಾರೆ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಬಿಜೆಪಿ ಅನುಸರಿಸಲಿ….

ಕಾಂಗ್ರೆಸ್‌ ಪಕ್ಷದ ವೇದಿಕೆಯಲ್ಲಿ ಎಷ್ಟು ಜನ ತುಂಬಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಕಾರ್ಯಕರ್ತರಿಗಿಂತ ನಾಯಕರೇ ಹೆಚ್ಚಿರುತ್ತಾರೆ. ಈ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಅನುಸರಿಸಬೇಕು. ವೇದಿಕೆಯಲ್ಲಿ ಎಷ್ಟು ಜನ ಇರಬೇಕು. ಯಾರು ವೇದಿಕೆಯ ಕೆಳಗಿರಬೇಕು. ಯಾವ ಸಂದರ್ಭದಲ್ಲಿ ಯಾರಿಗೆ ಮಾತನಾಡಲು ಅವಕಾಶ ನೀಡಬೇಕು ಎಂಬುದು ಬಿಜೆಪಿಯಿಂದ ಕಾಂಗ್ರೆಸ್‌ ಕಲಿಯಬೇಕು. ಇಡೀ ದೇಶದಲ್ಲಿ ಬಿಜೆಪಿ ಸಿದ್ಧಾಂತವನ್ನು ಜನರು ಬೆಂಬಲಿಸುತ್ತಿದ್ದಾರೆ. ಮೋದಿಯವರನ್ನು ಹೊಗಳುವುದು ಹಾಗೂ ಹಿಂದುತ್ವವನ್ನು ಬೆಂಬಲಿಸುವುದರಲ್ಲಿ ತಪ್ಪೆನಿಲ್ಲ. ಹಾಗೆಯೇ ಜೆಡಿಎಸ್‌, ಕಾಂಗ್ರೆಸ್‌ನ ತುಷ್ಟೀಕರಣಕ್ಕೂ ಆಕ್ಷೇಪವಿಲ್ಲ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು.