ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ

ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ

ಬೆಂಗಳೂರು: ಯಾವುದೇ ನೋಟುಗಳ ಮೇಲೆ ಏನನ್ನಾದರೂ ಬರೆದರೆ ಭಾರತೀಯ ರಿಸರ್ವ್ ಬ್ಯಾಂಕ್​ನ ಹೊಸ ಮಾರ್ಗಸೂಚಿಗಳ ಪ್ರಕಾರ ಅಂಥ ನೋಟುಗಳು ಮೌಲ್ಯ ಕಳೆದುಕೊಳ್ಳುತ್ತವೆ, ಅವುಗಳನ್ನು ಚಲಾಯಿಸುವಂತಿಲ್ಲ ಹಾಗೂ ಯಾರೂ ಸ್ವೀಕರಿಸುವಂತಿಲ್ಲ ಎಂಬ ಮಾಹಿತಿಯೊಂದು ಎಲ್ಲೆಡೆ ಹರಿದಾಡುತ್ತಿದೆ.

ಇಂಥದ್ದೊಂದು ಮಾಹಿತಿ ಪ್ರೆಸ್ ಇನ್​​ಫಾರ್ಮೇಷನ್​ ಬ್ಯೂರೋವನ್ನು ಕೂಡ ತಲುಪಿದ್ದು, ಅವರು ಈ ಕುರಿತ ಸ್ಪಷ್ಟನೆಯೊಂದನ್ನು ನೀಡಿ ಸತ್ಯಾಂಶವನ್ನು ತಿಳಿಸಿದ್ದಾರೆ. ಅಮೆರಿಕದಲ್ಲೂ ಈ ಥರದ ನಿಯಮವಿದೆ, ಅಲ್ಲಿ ಡಾಲರ್​ಗಳ ಮೇಲೆ ಬರೆಯವಂತಿಲ್ಲ ಮತ್ತು ಅಂಥ ಡಾಲರ್​ಗಳನ್ನು ಯಾರೂ ಸ್ವೀಕರಿಸುವುದಿಲ್ಲ ಎಂಬ ಮಾಹಿತಿಯೊಂದಿಗೆ ಭಾರತೀಯ ನೋಟುಗಳ ಕುರಿತಾಗಿಯೂ ಇದೇ ವಿಚಾರ ಹರಿಯಬಿಡಲಾಗಿದೆ.

ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಚಾರವನ್ನು ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋದ ಫ್ಯಾಕ್ಟ್​ಚೆಕ್​ ಸುಳ್ಳು ಎಂದಿರುವುದಲ್ಲದೆ, ಆ ಕುರಿತು ಸ್ಪಷ್ಟನೆಯನ್ನೂ ಪ್ರಕಟಿಸಿದೆ. ಏನನ್ನಾದರೂ ಬರೆದಿರುವ ನೋಟುಗಳು ಅಮಾನ್ಯವಾಗುವುದಿಲ್ಲ, ಅವುಗಳು ಕಾನೂನಾತ್ಮಕವಾಗಿ ಮೌಲ್ಯಯುತವಾಗಿಯೇ ಇರುತ್ತದೆ ಎಂದು ಪಿಐಬಿ ಹೇಳಿದೆ.

ಅದಾಗ್ಯೂ ಕ್ಲೀನ್ ನೋಟ್ ಪಾಲಿಸಿ ಪ್ರಕಾರ ನೋಟುಗಳ ಬೇರೆ ಬರವಣಿಗೆ ಸರಿಯಲ್ಲ. ಏನನ್ನಾದರೂ ಬರೆಯುವುದರಿಂದ ಅದು ನೋಟುಗಳನ್ನು ವಿರೂಪವಾಗಿಸುವ ಜತೆಗೆ ಅವುಗಳ ಬಾಳಿಕೆಯ ಅವಧಿಯನ್ನೂ ಕ್ಷೀಣಿಸುವಂತೆ ಮಾಡುತ್ತವೆ. ಹೀಗಾಗಿ ಯಾರೂ ನೋಟುಗಳ ಮೇಲೆ ಬರೆಯಬಾರದು ಎಂಬುದಾಗಿ ಪ್ರೆಸ್​ ಇನ್​ಫಾರ್ಮೇಷನ್ ಬ್ಯೂರೋ ಮನವಿ ಮಾಡಿಕೊಂಡಿದೆ.