ವಾಣಿಜ್ಯ ಬಳಕೆಗೆ ತಮ್ಮ ಹೆಸರು, ಧ್ವನಿ ಬಳಸದಂತೆ ರಜನಿಕಾಂತ್ ಎಚ್ಚರಿಕೆ

ಭಾರತೀಯ ಸಿನಿಮಾ ರಂಗದ ಖ್ಯಾತ ನಟ ರಜನಿಕಾಂತ್ ತಮ್ಮ ಧ್ವನಿ ಹಾಗೂ ಹೆಸರನ್ನು ವಾಣಿಜ್ಯ ಬಳಕೆಗೆ ಬಳಸದಂತೆ ಸಾರ್ವಜನಿಕವಾಗಿ ಎಚ್ಚರಿಕೆ ನೋಟಿಸ್ ನೀಡಿದ್ದಾರೆ. ಕೇವಲ ತಮ್ಮ ಹೆಸರು ಮಾತ್ರವಲ್ಲ, ತಮ್ಮ ಸ್ಟೈಲ್, ಸಿನಿಮಾದ ತುಣುಕು, ಧ್ವನಿ ಹಾಗೂ ಮ್ಯಾನರಿಸಂ ಅನ್ನು ಬಳಸದಂತೆ ಸಾರ್ವಜನಿಕವಾಗಿ ನೋಟಿಸ್ ಜಾರಿ ಮಾಡಿದ್ದಾರೆ.
ರಜನಿಕಾಂತ್ ಅರಿವಿಗೆ ಬಾರದಂತೆ ಅವರು ಫೋಟೋ, ವಿಡಿಯೋ ತುಣುಕು, ಧ್ವನಿ ಮತ್ತು ವಿವಿಧ ಸ್ಟೈಲ್ ನ ಚಿತ್ರಗಳನ್ನು ವಾಣಿಜ್ಯ ಬಳಕೆಗಾಗಿ ಬಳಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ನೋಟಿಸ್ ಅನ್ನು ಅವರು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದಾರೆ. ರಜನಿಕಾಂತ್ ಅವರ ಪರವಾನಿಗೆ ತಗೆದುಕೊಂಡು ಬಳಸುವಂತೆಯೂ ಅವರು ಮನವಿ ಮಾಡಿದ್ದಾರೆ. ಅಲ್ಲದೇ, ತಮ್ಮ ಗೌರವಕ್ಕೆ ಧಕ್ಕೆ ತರುವಂತೆ ಕೆಲವು ಕಡೆ ಬಳಕೆ ಆಗಿರುವ ಕುರಿತು ರಜನಿಕಾಂತ್ ಅಸಮಾಧಾನ ಹೊರ ಹಾಕಿದ್ದಾರೆ.
ಈ ಹಿಂದೆ ಇಂಥದ್ದೊಂದು ಸಾರ್ವಜನಿಕ ನೋಟಿಸ್ ಅನ್ನು ಬಾಲಿವುಡ್ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ನೀಡಿದ್ದರು. ನಾನಾ ಜಾಹೀರಾತುಗಳಲ್ಲಿ ಅಮಿತಾಭ್ ಅವರನ್ನು ಬಳಕೆ ಮಾಡಿದ್ದರ ವಿರುದ್ಧ ಕಿಡಿಕಾರಿದ್ದರು. ವಾಣಿಜ್ಯ ಉದ್ದೇಶ ಇಟ್ಟುಕೊಂಡು ಅಮಿತಾಭ್ ಫೋಟೋ, ಧ್ವನಿ ಮತ್ತು ಸಿನಿಮಾದ ತುಣುಕುಗಳನ್ನು ಬಳಸಿದವರು ವಿರುದ್ಧ ಚಾಟಿ ಬೀಸಿದ್ದರು. ಕಾನೂನು ಕ್ರಮಕ್ಕೂ ಅವರು ಮುಂದಾಗಿದ್ದರು. ಇದೀಗ ರಜನಿಕಾಂತ್ ಕೂಡ ಬಿಗ್ ಬಿಗ್ ಹಾದಿಯನ್ನು ಹಿಡಿದಿದ್ದಾರೆ.