ಕೇಂದ್ರದ ನೂತನ ಐಟಿ ನಿಯಮಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ಗೆ ಸಂಗೀತಗಾರ ಟಿ ಎಂ ಕೃಷ್ಣ ಅರ್ಜಿ

ಕೇಂದ್ರದ ನೂತನ ಐಟಿ ನಿಯಮಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ಗೆ ಸಂಗೀತಗಾರ ಟಿ ಎಂ ಕೃಷ್ಣ ಅರ್ಜಿ

ಚೆನ್ನೈ: ಕೇಂದ್ರ ಸರ್ಕಾರದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಸಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿಎಂ ಕೃಷ್ಣ ಗುರುವಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ ನಿಯಮಗಳ ಮಾರ್ಗಸೂಚಿಗಳು), 2021 ಅನಿಯಂತ್ರಿತ, ಅಸ್ಪಷ್ಟ ಮತ್ತು ಅವಿವೇಕದ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅರ್ಜಿಯನ್ನು ಒಪ್ಪಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸಂಥಿಲ್ ಕುಮಾರ್ ರಾಮಮೂರ್ತಿ ಅವರನ್ನೊಳಗೊಂಡ ಮೊದಲ ನ್ಯಾಯಪೀಠ ಈ ಅರ್ಜಿಯ ಬಗ್ಗೆ ಮೂರು ವಾರಗಳಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್.ಶಂಕರನಾರಾಯಣನ್ ಅವರಿಗೆ ನಿರ್ದೇಶನ ನೀಡಿತು.

ಹೊಸ ನಿಯಮಗಳು ಅಸಂವಿಧಾನಿಕ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ಕ್ಕೆ ಅಲ್ಟ್ರಾ ವೈರಸ್ ಅಂತಾ ಘೋಷಿಸುವಂತೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಹೊಸ ನಿಯಮಗಳು ಖಾಸಗಿತನ ಹಾಗೂ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದ್ದು, ಅಸಂವಿಧಾನಿಕವಾಗಿದೆ. ಕಲಾವಿದರು ಮತ್ತು ಸಾಂಸ್ಕೃತಿಕ ವಿಮರ್ಶಾತ್ಮಕರ ಹಕ್ಕುಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಅರ್ಜಿಯಲ್ಲಿ ಕೃಷ್ಣ ಉಲ್ಲೇಖಿಸಿದ್ದಾರೆ.

ನನಗೆ ಸಂಗೀತದಂತೆಯೇ, ಖಾಸಗಿತನವೂ ಇಷ್ಟ. ಅದೊಂದು ಅನುಭವವಾಗಿದೆ. ನಾನು ಖಾಸಗಿತನ ಬಗ್ಗೆ ಯೋಚಿಸುವಾಗ, ಜೀವನ, ಅನ್ಯೋನ್ಯತೆ, ಅನುಭವ, ಆವಿಷ್ಕಾರ, ಭದ್ರತೆ, ಸಂತೋಷ, ಭಯದ ಕೊರತೆ ಮತ್ತು ಸೃಷ್ಟಿಸಲು ಸ್ವಾತಂತ್ರದ ಬಗ್ಗೆ ಯೋಚಿಸುತ್ತೇನೆ. ಒಬ್ಬ ಕಲಾವಿದನಾಗಿ ಮಾತ್ರವಲ್ಲದೆ ಮನುಷ್ಯನಾಗಿ, ಸ್ವಾತಂತ್ರ್ಯ, ಘನತೆ ಮತ್ತು ಆಯ್ಕೆಯ ಬಗ್ಗೆ ನನ್ನಲ್ಲಿ ಅಂತರ್ಗತವಾಗಿರುವ ಅಂಶಗಳೆಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದಲ್ಲಿ 2017 ರ ತೀರ್ಪಿನ ಪ್ರಕಾರ ಸಂವಿಧಾನದ 21 ನೇ ಪರಿಚೇದದ ಅಡಿಯಲ್ಲಿ ಜೀವನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಖಾತರಿಯಲ್ಲಿ ಗೌಪ್ಯತೆ ಹಕ್ಕನ್ನು ಸೂಚಿಸಲಾಗಿದೆ ಎಂದು ಟಿಎಂ ಕೃಷ್ಣ ಪರ ವಕೀಲ ಸುಹ್ರೀತ್ ಪಾರ್ಥಸಾರಥಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದರು.