ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ; ವಿಶ್ವನಾಥ್ ಪ್ರಶ್ನೆ

ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ; ವಿಶ್ವನಾಥ್ ಪ್ರಶ್ನೆ

ಬೆಂಗಳೂರು: ಮೀಸಲಾತಿ ಯಾರಿಗೆ ಏಕೆ ಕೊಡುತ್ತೀರಿ ಎಂದು ಕೇಳುತ್ತಿಲ್ಲ. ಕೊಡಿ ಸಂತೋಷ ಆದರೆ ಹಿಂದುಳಿದ ವರ್ಗಕ್ಕೆ ಹೊಡೆತ ಬೀಳುತ್ತದೆ. ಈಶ್ವರಪ್ಪ ಏನು ಮಾಡುತ್ತಿದ್ದೀರಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗುತ್ತದೆ.

ಎಲ್ಲ ಜನಾಂಗದವರು ಹೇಗೆ ಕೇಳುತ್ತಾರೆ. ಉಳಿದವರು ಅಷ್ಟೇ ಜಾಗೃತರಾಗಿರಬೇಕು ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪಂಗಡಕ್ಕೆ ಈಗ ಘೋಷಣೆ ಮಾಡಿದ್ದಾರೆ. ಆದರೆ ಅದು ಜಾರಿಗೆ ಬರಲು ಎಷ್ಟು ಕಷ್ಟವಿದೆ. ಅಧಿವೇಶನಕ್ಕೆ ಬರಬೇಕು, ನಂತರ ಶೆಡ್ಯೂಲ್ 9ಗೆ ತಿದ್ದುಪಡಿ ತರಬೇಕಿದೆ. ಆದ್ದರಿಂದ ಮೀಸಲಾತಿ ಬಗ್ಗೆ ನಾಡಿನುದ್ದಕ್ಕೂ ಅಮೂಲಾಗ್ರ ಚರ್ಚೆಯಾಗಬೇಕು ಎಂದರು.

ರಾಜ್ಯ ಸರ್ಕಾರ ಎಸ್.ಸಿ.,ಎಸ್.ಟಿ.ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿದೆ. ಬಹು ವರ್ಷಗಳ ಬೇಡಿಕೆ ಇತ್ತು. ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಕೂಡ 241 ದಿನ ಹೋರಾಟ ಮಾಡಿದ್ದರು. ಕೊಡಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಬೇರೆಯವರಿಗೆ ಅನ್ಯಾಯವಾಗಬಾರದು ಎಂದು ತಿಳಿಸಿದರು.

ಈಗ ಎಲ್ಲ ಜನಾಂಗದವರು ನಮಗೆ ಮೀಸಲಾತಿ ಬೇಕು ಎನ್ನುತ್ತಿದ್ದಾರೆ. ಕೇಳುವುದು ಎಲ್ಲರ ಹಕ್ಕು, ಆದರೆ ಕೊಡೋದು ಸರ್ಕಾರ. ನಮ್ಮಲ್ಲಿ ಮಡಿವಾಳರು ಇದ್ದಾರೆ, ಮಲ ಹೊರುವವರು ಇದ್ದಾರೆ. ಉತ್ತರ ಪ್ರದೇಶದ ಬ್ರಾಹ್ಮಣರು ಕಟಿಂಗ್ ಮಾಡುತ್ತಾರೆ. ನಮ್ಮ ಸಮಾಜ ಕೂಡ ಕೊಡಗಿನಲ್ಲಿದೆ. ಪ್ರದೇಶ ನಿರ್ಬಂಧ ತೆಗೆದು ಹಾಕಿದರೆ ಕುರುಬರೂ ಕೂಡ ಎಸ್ಟಿಗಳೇ ಎಂದರು.

ದೇವೇಗೌಡರ ಹೆಸರು ಏಕೆ ಹೇಳುತ್ತಿಲ್ಲ?
ಅನೇಕ ಜನಾಂಗ ಮೀಸಲಾತಿ ಅನುಭವಿಸುತ್ತಿವೆ. ದೇವರಾಜ್ ಅರಸು ಅವರು ಲಿಂಗಾಯತರು, ಒಕ್ಕಲಿಗರು ಹಾಗೂ ಇತರರಿಗೂ ಮೀಸಲಾತಿ ಕೊಟ್ಟರು. ದೇವೇಗೌಡರು ಕೂಡ ಮೀಸಲಾತಿ ಕೊಟ್ಟರು. ಅವರ ಹೆಸರನ್ನು ಏಕೆ ಹೇಳುತ್ತಿಲ್ಲ? ಎಂದು ಕೇಳಿದರು.

ಅನೇಕ ಜನಾಂಗದವರು ಸಚಿವರಾಗಲು ದೇವೇಗೌಡರು ಕಾರಣ. ಕೆಲವರು ಗುಲಾಮರಾಗಿರುತ್ತೇವೆ ಎನ್ನುತ್ತಾರೆ. ದೇವೇಗೌಡರು ಮಾಡಿದ ಸಹಾಯ ಮರೆತುಬಿಟ್ರೇನಪ್ಪ ಎಂದು ಕೆಣಕಿದರು.

ಕಡಲೆಕಾಯಿ, ಬಾದಾಮಿ ಒಂದೇನಾ?
ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಕೊಟ್ಟಿದ್ದಾರೆ. ಕುರಿ ಕಾಯುವವನೂ ವಿಶ್ವನಾಥ್ ಮಗ ಇಬ್ಬರೂ ಒಂದೇನಾ? ಊರಲ್ಲಿ ತಮಟೆ ಹೊಡೆಯುವವನು, ಖರ್ಗೆ ಮಗನೂ ಒಂದೇನಾ? ಮಲ ಬಳಿಯೋನು, ಮುನಿಯಪ್ಪನ ಮಗನೂ ಒಂದೇನಾ? ಕಡಲೆಕಾಯಿ ತಿನ್ನೋನಿಗೂ, ಬಾದಾಮಿ ತಿನ್ನೋನಿಗೂ ಒಂದೇನಾ? ಇಲ್ಲಿ ಎಲ್ಲವೂ ಚರ್ಚೆಯಾಗಬೇಕು. ಯಾರಿಗೆ ಮೀಸಲಾತಿ ಸಿಗಬೇಕು ಎನ್ನುವ ಕುರಿತು ವಿಸ್ತೃತ ಚರ್ಚೆಯಾಗಬೇಕು ಎಂದು ವಿಶ್ವನಾಥ್ ಹೇಳಿದರು.